ಕೂಡಿಗೆ, ಅ. ೧೦: ಕೂಡಿಗೆ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮಿತಿಮೀರಿದ್ದು, ತೋಟಗಳಿಗೆ ನುಗ್ಗಿ ಫಸಲನ್ನು ತಿಂದು ಹಾಳು ಮಾಡುತ್ತಿವೆ. ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಸ್ಥಳದಿಂದ ಹೆಬ್ಬಾಲೆವರೆಗೆ, ಮತ್ತು ಹಾರಂಗಿ ನದಿ ದಂಡೆಯ ಕೂಡಿಗೆ ಮದಲಾಪುರವರೆಗೆ ನದಿ ಅಂಚಿನ ಪ್ರದೇಶಗಳಲ್ಲಿ ಬೆಳೆದ ಜೋಳ ಮತ್ತು ಸಿಹಿಗೆಣಸು ತಿಂದು ನಾಶಪಡಿಸಿದಲ್ಲದೆ ಮತ್ತು ಈ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ನೂರಾರು ತೆಂಗಿನ ಮರಕ್ಕೆ ಮಂಗಗಳು ಹತ್ತಿ ಎಳ ನೀರನ್ನು ಕುಡಿಯುತ್ತಿವೆ.

ಕೂಡಿಗೆಯಿಂದ ಹೆಬ್ಬಾಲೆವರೆಗೆ ಈಗಾಗಲೇ ಮುಸುಕಿನ ಜೋಳದ ಬೆಳೆ ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಮಂಗಗಳ ಹಿಂಡು ಹೊಲಗಳಿಗೆ ನುಗ್ಗಿ ಜೋಳ ಬೆಳೆಗಳನ್ನು ನಷ್ಟ ಪಡಿಸುತ್ತಿವೆ ಎಂದು ಈ ವ್ಯಾಪ್ತಿಯ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರೈತರು ಪಟಾಕಿಗಳನ್ನು ಸಿಡಿಸಿದರೂ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿ ಹೋಗುತ್ತಿವೆ. ಆದರೆ ಕೆಲ ನದಿ ದಂಡೆಯ ರೈತರು ತಮ್ಮ ಭೂಮಿಯಲ್ಲಿ ಬೆಳೆಯನ್ನು ಬೆಳೆಯುವುದನ್ನೇ ಬಿಡುವಂತ ಪ್ರಸಂಗ ಎದುರಾಗಿದೆ. ಸಂಬAಧಿಸಿದ ಅರಣ್ಯ ಇಲಾಖೆ ಮಂಗಗಳನ್ನು ಸೆರೆಹಿಡಿದು ಬೇರೆಡೆಗೆ ಬಿಡುವಂತಹ ಕಾರ್ಯಕ್ಕೆ ಮುಂದಾಗಬೇಕೆAದು ರೈತರು ಆಗ್ರಹಿಸಿದ್ದಾರೆ.