ಮಡಿಕೇರಿ, ಅ. ೯: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ (ಶೇ. ೧೫ ರಿಂದ ೧೭ ಕ್ಕೆ ) ಮತ್ತು ಪರಿಶಿಷ್ಟ ಪಂಗಡಗಳ (ಶೇ. ೩ ರಿಂದ ೦೭ ಕ್ಕೆ) ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಇದು ಕರ್ನಾಟಕ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದು ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಭಾನುವಾರ ನಡೆದ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ತಿರ್ಮಾನಿಸಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯಪರ ನುಡಿದಂತೆ ನಡೆದಿದೆ ಎಂದು ಶಾಸಕದ್ವಯರು ಹೇಳಿದರು.

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದೆ. ಸಮಾಜ ಕಲ್ಯಾಣ, ಪರಿಶಿಷ್ಟç ಪಂಗಡ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ಮಹರ್ಷಿ ವಾಲ್ಮೀಕಿ ಅವರು ಬೇಡ ಜನಾಂಗದಲ್ಲಿ ಹುಟ್ಟಿ ರಾಮಾಯಣ ಬರೆಯುವ ಮೂಲಕ ಇಡೀ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಪಂಚಕ್ಕೆ ರಾಮಾಯಣ ಮಹಾಕಾವ್ಯದ ಮೂಲಕ ಬೆಳಕು ನೀಡಿದ ಹಾಗೂ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಸಾರಿದ್ದರು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ನುಡಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ೭೫ ರಷ್ಟು ಉಚಿತ ವಿದ್ಯುತ್ ಯೂನಿಟ್ ನೀಡಲು ಸರ್ಕಾರ ಮುಂದಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ನಿರ್ಮಾಣಕ್ಕೆ ಮುಂದಾಗಲಾಗಿದೆ. ಭೂ ಚೇತನ, ಸ್ವಯಂ ಉದ್ಯೋಗ ಯೋಜನೆ ಹಾಗೂ ವಸತಿ ಯೋಜನೆಗೆ ಆದ್ಯತೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ಮಹಾಕಾವ್ಯ ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಆ ದಿಸೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ್ ಆರ್.ಹೆಗಡೆ ಮಾತನಾಡಿ, ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ. ರಾಮಾಯಣ ಮಹಾಕಾವ್ಯ ಬರೆಯುವ ದೇಶದ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಶ್ರೀರಾಮನನ್ನು ಕುರಿತು ಇಡೀ ಬ್ರಹ್ಮಾಂಡವೇ ಮೆಚ್ಚಿಕೊಳ್ಳುವಂತಹ ರಾಮಾಯಣ ಒಂದು ಅದ್ಭುತ ಗ್ರಂಥವನ್ನು ವಾಲ್ಮೀಕಿ ರಚಿಸಿದರು. ವಿಶ್ವಕ್ಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದಾರೆ.

ನಾಗರಿಕತೆಯ ಬದಲಾವಣೆಗೆ ವಾಲ್ಮೀಕಿಯವರ ಬದುಕು ಒಂದು ಉತ್ತಮ ನಿದರ್ಶನವಾಗಿದೆ, ವಾಲ್ಮೀಕಿ ಬರೆದ ರಾಮಾಯಣ ಕೃತಿ ಪ್ರಪಂಚದ ಮಹಾನ್ ಗ್ರಂಥವಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಮಾತನಾಡಿದರು.

ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಶಾಲು, ಪ್ರಶಸ್ತಿ ಪತ್ರ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ತಿತಿಮತಿಯ ಆದಿವಾಸಿ ಮುಖಂಡರಾದ ಸುಬ್ರು, ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷರಾದ ಆರ್.ಕೆ.ಚಂದ್ರು ಇತರರು ಇದ್ದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ ಅವರು ಸ್ವಾಗತಿಸಿದರು. ತಿತಿಮತಿಯ ಏಕಲವ್ಯ ವಸತಿ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಬಾಳುಗೋಡು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರಾದ ದಿಲನ್ ಮುತ್ತಣ್ಣ ನಿರೂಪಿಸಿದರು, ತಿತಿಮತಿ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಷಡಕ್ಷರಿ ವಂದಿಸಿದರು.