ಸೋಮವಾರಪೇಟೆ, ಅ .೭: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಸಂಪರ್ಕಿಸುವ ಮಸಗೋಡು-ಕಣಿವೆ ಮುಖ್ಯರಸ್ತೆ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ತಾ.೧೦ರಂದು ಪ್ರತಿಭಟನಾ ಮೆರವಣಿಗೆ ಮೂಲಕ ಲೋಕೋಪಯೋಗಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೋಮವಾರಪೇಟೆ ತಾಲೂಕು ಹಾಗೂ ಕುಶಾಲನಗರ ತಾಲೂಕು ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎನ್. ಅನಂತ್ ಅವರು, ಹೊಂಡಾಗುAಡಿಗಳ ರಸ್ತೆ ದುರಸ್ತಿಗೆ ಆಗ್ರಹಿಸಿ ಕಳೆದ ೧ ತಿಂಗಳ ಹಿಂದೆಯೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಮಸಗೋಡು ಗ್ರಾಮದಿಂದ ಕಣಿವೆ ಸಂಪರ್ಕಿಸುವ ಸುಮಾರು ೧೮ ಕಿ.ಮೀ. ರಸ್ತೆಯ ಪೈಕಿ ೧೬ ಕಿ.ಮೀ. ರಸ್ತೆ ಇನ್ನಿಲ್ಲದಂತೆ ಹಾಳಾಗಿದೆ. ಕಳೆದ ೧೦ ವರ್ಷಗಳಿಂದ ದುರಸ್ತಿ ಮಾಡಿಲ್ಲ. ರಸ್ತೆಯ ತುಂಬೆಲ್ಲಾ ಹೊಂಡಾ ಗುಂಡಿಗಳು ನಿರ್ಮಾಣವಾಗಿದ್ದು, ನಡೆದಾಡಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ತಾ. ೧೦ರಂದು ಬೆಳಿಗ್ಗೆ ೧೦ ಗಂಟೆಯಿAದ ಅಂಬೇಡ್ಕರ್ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಆಗಮಿಸಿ ಲಿಖಿತ ಭರವಸೆ ನೀಡುವವರೆಗೂ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ, ಚುನಾವಣೆ ಬಹಿಷ್ಕಾರ, ವಿಧಾನ ಸೌಧ ಚಲೋ ಸೇರಿದಂತೆ ಕಾನೂನು ಹೋರಾಟವನ್ನೂ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಯ ಪ್ರದೇಶದಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಸಹ ನಿರ್ದೇಶನ ನೀಡಿದೆ. ಈ ಆದೇಶವನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಸಮಿತಿಯ ಸದಸ್ಯ ಹಾಗೂ ಗ್ರಾ.ಪಂ. ಮಾಜೀ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ಆಗ್ರಹಿಸಿದರು.

ಈ ಹಿಂದೆ ಮನವಿ ಸಲ್ಲಿಸಿದ ಸಂದರ್ಭ ಇಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದನ್ನು ಹೊರತುಪಡಿಸಿ ಇನ್ಯಾವುದೇ ಬೆಳವಣಿಗೆ ನಡೆದಿಲ್ಲ. ಲೋಕೋಪಯೋಗಿ ಇಲಾಖಾ ಸಚಿವರಿಗೆ ಎಸ್ಟಿಮೇಟ್ ನೀಡಲಾಗಿದೆ. ಆದರೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ರಸ್ತೆ ಅವ್ಯವಸ್ಥೆಯಿಂದಾಗಿ ಕೃಷಿಕರು, ಕೂಲಿಕಾರ್ಮಿಕರು, ಹಾಡಿವಾಸಿಗಳು, ವಿದ್ಯಾರ್ಥಿಗಳ ಜೀವನ ಅಸ್ತವ್ಯಸ್ಥವಾಗಿದೆ ಎಂದು ಸಮಿತಿಯ ಸದಸ್ಯ ಬೋಜೇಗೌಡ ಹೇಳಿದರು.

ತಾ. ೧೦ರಂದು ನಡೆಯುವ ಪ್ರತಿಭಟನೆಯಲ್ಲಿ ಮಸಗೋಡು, ನೇಗಳ್ಳೆ, ಅರೆಯೂರು, ಯಲಕನೂರು, ಹೊಸಳ್ಳಿ, ಸೀಗೇಹೊಸೂರು, ಭುವನಗಿರಿ, ಹಳೆ ಮದಲಾಪುರ, ಆಡಿನಾಡೂರು, ಜೇನುಕಲ್ಲುಬೆಟ್ಟ,ಕಣಿವೆ, ನೇರಳೆ, ಮೋರಿಕಲ್ಲು, ಗಂಗಾಕಲ್ಯಾಣ, ಕಾಟಿಕೊಪ್ಪಲು ಗ್ರಾಮಸ್ಥರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿದ್ದ ಸಮಿತಿಯ ಉಪಾಧ್ಯಕ್ಷ ಹೆಚ್.ಕೆ. ಲೋಕೇಶ್, ಖಜಾಂಚಿ ಲೋಕಾನಂದ್ ಇದ್ದರು.