ಮಡಿಕೇರಿ, ಅ. ೮ :ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಕ್ಕೆ ಕೇವಲ ಒಂದು ವಾರದ ಕಾಲಾವಕಾಶ ಮಾತ್ರ ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಮೂಲಕ ಹೊರ ತರಲಾಗುತ್ತಿರುವ ವಿವಿಧ ಪುಸ್ತಕಗಳ ಬಿಡುಗಡೆಗಾಗಿ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಸುಮಾರು ೧೫ಕ್ಕೂ ಅಧಿಕ ಪುಸ್ತಕಗಳು ಲೋಕಾರ್ಪಣೆಯಾಗ ಬೇಕಿದೆ. ಅಧಿಕಾರಾವಧಿ ಮುಕ್ತಾಯದ ಹಂತ ತಲುಪುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಮುಂದಾಳತ್ವದಲ್ಲಿ ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಾ. ೧೦ರಂದು ಅಕಾಡೆಮಿ ಹಾಗೂ ಚೆನ್ನೆöÊಯ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಸಹಯೋಗದಲ್ಲಿ ತಮಿಳುವಿನಿಂದ ಕೊಡವ ಭಾಷೆಗೆ ತರ್ಜುಮೆ ಮಾಡಲಾಗಿರುವ ಖ್ಯಾತ ಪುಸ್ತಕ ತಿರುಕ್ಕುರಳ್‌ನ ಕೊಡವ ಪಾಜೆಕ್ ತಿರುಕ್ಕುರಳ್-ಅರಿವು ಪುಸ್ತಕ ಬಿಡುಗಡೆ ಅಪರಾಹ್ನ ೨ಕ್ಕೆ ಅಕಾಡೆಮಿ ಕಚೇರಿಯಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು ಅತಿಥಿಗಳಾಗಿ ಕ.ಸಾ.ಪ. ಅಧ್ಯಕ್ಷ ಕೇಶವ ಕಾಮತ್, ತಮಿಳು-ಕೊಡವ ತಜ್ಞ ಡೆನ್ನಿಸ್ ಡಿಸೋಜಾ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ಚೆನ್ನೆöÊನ ಡಾ. ಅಳಗು ಮುತ್ತು ವಿ. ಪುಸ್ತಕ ತರ್ಜುಮೆ ಮಾಡಿರುವ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರುಗಳು ಪಾಲ್ಗೊಳ್ಳಲಿದ್ದಾರೆ.

ತಾ. ೧೧ರಂದು ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಇನ್ನೂ ಮೂರು ಪುಸ್ತಕಗಳು ಬಿಡುಗಡೆಯಾಗಲಿದೆ. ದೇವಕಾಡ್‌ನ ವಿಶ್ಲೇಷಣೆ, ವೈಲ್ಡ್ ಫ್ರೂಟ್ಸ್ ಆಫ್ ಕೊಡಗು, ಮಾನವ-ವನ್ಯಜೀವಿ ಸಂಘರ್ಷ ಕುರಿತಾದ ಪುಸ್ತಕಗಳು ಇದಾಗಿವೆ. ಇದಾದ ನಂತರ ತಾ. ೧೨ ಹಾಗೂ ತಾ. ೧೩ರಂದು ಐ.ಮಾ. ಮುತ್ತಣ್ಣ ಅವರ ಪ್ರಸಿದ್ಧ ಪುಸ್ತಕ ಟೈನಿ ಮಾಡಲು ಸ್ಟೇಟ್ ಆಫ್ ಸೌತ್ ಇಂಡಿಯದ ಮರು ಮುದ್ರಣ ಸೇರಿದಂತೆ ಇನ್ನಿತರ ಸಂಶೋಧನಾ ಗ್ರಂಥ ಹಾಗೂ ಇನ್ನೂ ಕೆಲವು ಪುಸ್ತಕಗಳನ್ನು ಹೊರ ತರಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ತಾ. ೧೫ಕ್ಕೆ ಮುಕ್ತಾಗೊಳ್ಳುತ್ತಿದೆ. ಈ ನಡುವೆ ಇತ್ತೀಚೆಗಷ್ಟೆ ಅಕಾಡೆಮಿಗೆ ನೇಮಕ ಮಾಡಲಾಗಿರುವ ನಾಲ್ವರು ನೂತನ ಸದಸ್ಯರನ್ನು ಸೇರಿಸಿಕೊಂಡು ಅಂತಿಮ ಸಭೆಯೊಂದನ್ನು ನಡೆಸಲಾಗುವುದು. ಈ ಸದಸ್ಯ ನೇಮಕದ ಬಳಿಕ ಸರ್ವ ಸದಸ್ಯರ ಆಡಳಿತ ಮಂಡಳಿ ಸಭೆ ನಡೆಸಲು ಕಾಲಾವಕಾಶದ ಕೊರತೆ ಯಾಗಿತ್ತು. ಈ ಕಾರಣದಿಂದಾಗಿ ಇವರನ್ನು ಅಂತಿಮ ಸಭೆಗೆ ಕರೆಸಲಾ ಗುತ್ತಿದೆ ಎಂದು ಅವರು ತಿಳಿಸಿದ್ದಾರೆ.