ಕುಶಾಲನಗರ, ಅ. ೬: ಕುಶಾಲನಗರದ ಸಮೀಪ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಲೈಸೆನ್ಸ್ ಆಧಾರದಲ್ಲಿ ಕೋಳಿ ಮಾಂಸ ಮಾರಾಟ ರದ್ದುಗೊಳಿಸಿದ ಕ್ರಮಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.

ಕೊಪ್ಪ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೈಸೆನ್ಸ್ ಆಧಾರದಲ್ಲಿ ಕೆ.ಆರ್. ಮೋಹನ್ ಕುಮಾರ್ ಮತ್ತು ಎಸ್ ಆರ್ ಅನಿತಾ ಸೇರಿದಂತೆ ಹಲವು ಅಂಗಡಿಗಳಿಗೆ ಅನುಮತಿ ನೀಡುವ ಮೂಲಕ ವ್ಯಾಪಾರ ನಡೆಸಲಾಗುತ್ತಿತ್ತು.

ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಏಕಾಏಕಿ ನೋಟೀಸ್ ನೀಡಿ ಪೊಲೀಸರ ಸಹಾಯದೊಂದಿಗೆ ಅಂಗಡಿಗಳನ್ನು ಮುಚ್ಚಿದ ಪ್ರಕರಣವನ್ನು ಮಾಂಸ ವ್ಯಾಪಾರಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಹೈಕೋರ್ಟ್ ಗ್ರಾಮ ಪಂಚಾಯಿತಿ ಆದೇಶಕ್ಕೆ ನಾಲ್ಕು ವಾರಗಳ ಮಧ್ಯಂತರ ತಡೆ ನೀಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹತ್ತು ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗಿ ದಾಖಲೆಗಳನ್ನು ನೀಡುವಂತೆ ಆದೇಶಿಸಿದೆ.