ವೀರಾಜಪೇಟೆ, ಅ. ೭: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ದಿವಂಗತ ಮಹಾಬಲೇಶ್ವರ ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟಿ.ಪಿ. ರಮೇಶ್ ಅವರು ಶಿಕ್ಷಣ, ಸಾಹಿತ್ಯ, ರಾಜಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮಹಾಬಲೇಶ್ವರ ಭಟ್ ಅವರಿಗೆ ಪ್ರವಾಸವೂ ಅಚ್ಚುಮೆಚ್ಚಿನ ಹವ್ಯಾಸ. ಅವರು ಯುವ ಸಮುದಾಯಕ್ಕೆ ಪ್ರೇರಣೆಯಂತಿದ್ದರು ಎಂದು ನುಡಿದರು.

ದತ್ತಿ ಉಪನ್ಯಾಸಕರಾಗಿ ಮಾತನಾಡಿದ ಕಿಗ್ಗಾಲು ಜಿ. ಹರೀಶ್, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಾದ ಇತಿಹಾಸವಿದೆ. ಕನ್ನಡಿಗರು ಕೀಳರಿಮೆಯಿಂದ ಹೊರಬಂದು ಕನ್ನಡ ಲಿಪಿಯನ್ನು ಹೊಂದಿರುವ ಸ್ಥಳೀಯ ಭಾಷೆಗಳನ್ನು ಮಾತನಾಡುವುದು ಕನ್ನಡದ ಉಳಿವಿಗೆ ನೀಡುವ ಕೊಡುಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಬೆಕಲ್ಲು ನವೀನ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರನ್ನು ಹೆಚ್ಚಿಸುವ ಉದ್ದೇಶದಿಂದ ತಂತ್ರಾAಶ ಅಭಿವೃದ್ಧಿ ಪಡಿಸಿದ್ದು ಗೂಗಲ್ ಪ್ಲೇ ಸ್ಟೋರ್ ನಿಂದ ಎಲ್ಲರೂ ಡೌನ್‌ಲೋಡ್ ಮಾಡಿಕೊಂಡು ಸದಸ್ಯರಾಗಬಹುದು. ಭವಿಷ್ಯದ ದಿನಗಳಲ್ಲಿ ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷ ಪ್ರಶಾಂತ್, ಮದೆ ಮಹದೇಶ್ವರ ಕಾಲೇಜಿನ ಪ್ರಾಂಶುಪಾಲ ಸಿದ್ಧರಾಜು ಬೆಳ್ಳಯ್ಯ, ಮಡಿಕೇರಿ ತಾಲೂಕು ಕನ್ನ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಪ್ರತಿಮಾ ಹರೀಶ್ ರೈ, ಶ್ವೇತಾ ರವೀಂದ್ರ, ಗೌರಿ ನಂಜಪ್ಪ, ರಂಜಿತ್ ಉಪಸ್ಥಿತರಿದ್ದರು.

ರಂಜಿತ್ ಸ್ವಾಗತಿಸಿದರೆ, ಶಿಕ್ಷಕಿ ಸರಳಾ ನಿರೂಪಿಸಿ, ಪ್ರತಿಮಾ ಹರೀಶ್ ರೈ ವಂದಿಸಿದರು. ಶ್ವೇತಾ ರವೀಂದ್ರ ತಮ್ಮ ಗಾಯನದ ಮೂಲಕ ಸಭೀಕರನ್ನು ರಂಜಿಸಿದರು. ಮೂರ್ನಾಡು ವಿದ್ಯಾಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ, ಶಿಕ್ಷಕ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.