ಸಿದ್ದಾಪುರ, ಅ. ೭: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜಮಾಬಂದಿ ಗ್ರಾಮ ಸಭೆ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಕಾರ್ಮಿಕ ಮುಖಂಡರಾದ ಹೆಚ್.ಬಿ. ರಮೇಶ್ ಮಾತನಾಡಿ ಸಿದ್ದಾಪುರ ಗ್ರಾ.ಪಂ. ಯು ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾ.ಪಂ. ಆಗಿದ್ದು, ೨೫ ಜನ ಸದಸ್ಯರುಗಳು ಇರುವ ಪಂಚಾಯಿತಿಯಲ್ಲಿ ಇಂದಿನ ಈ ಸಭೆಗಳಿಗೆ ಆಡಳಿತಾರೂಢ ಪಕ್ಷದ ಸದಸ್ಯರು ಸೇರಿದಂತೆ ೧೮ ಕ್ಕೂ ಅಧಿಕ ಸದಸ್ಯರುಗಳು ಗೈರು ಹಾಜರಾಗಿದ್ದು, ಸಭೆಯಲ್ಲಿ ಸದಸ್ಯರುಗಳೇ ಭಾಗವಹಿಸದಿದ್ದಲ್ಲಿ ಸಭೆ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ನಂತರ ಸಭೆಯಿಂದ ಹೊರ ನಡೆದರು.

ಪಂಚಾಯಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗುಹ್ಯ ಗ್ರಾಮದ ನಿವಾಸಿ ರೆಜಿತ್ ಕುಮಾರ್ ಬೀದಿದೀಪಗಳ ನಿರ್ವಹಣೆಗೆ ಅಧಿಕ ಮೊತ್ತವನ್ನು ಅನಗತ್ಯವಾಗಿ ಖರ್ಚು ಮಾಡುತ್ತಿರುವುದು ಸರಿಯಲ್ಲ ಎಂದರು. ಉತ್ತಮ ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸುವಂತೆ ಸಲಹೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಅವರೆಗುಂದದ ನಿವಾಸಿಗಳು ರಸ್ತೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.

ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕಾದ ಸಿದ್ದಾಪುರ ಗ್ರಾ.ಪಂ. ಯ ಗ್ರಾಮ ಸಭೆಯಲ್ಲಿ ೨೫ ಮಂದಿ ಸದಸ್ಯರ ಪೈಕಿ ೬ ಮಂದಿ ಸದಸ್ಯರುಗಳು ಮಾತ್ರ ಭಾಗವಹಿಸಿದ್ದಲ್ಲಿ ಗ್ರಾಮಸ್ಥರು ಪಂಚಾಯಿತಿ ಸದಸ್ಯರುಗಳ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ನೋಡೆಲ್ ಅಧಿಕಾರಿ ರಾಜೇಶ್ ಕುಮಾರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್‌ಮೋಹನ್ ಕಾರ್ಯದರ್ಶಿ ಮೋಹನ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.