ಮಡಿಕೇರಿ, ಅ. ೭: ಮುಂದಿನ ಸಾಲಿನಿಂದ ಮಡಿಕೇರಿ ದಸರಾ ಆಚರಣೆಗೆ ಜಂಬೂ ಸವಾರಿ ಆರಂಭ ಮಾಡುವುದಾಗಿ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಘೋಷಿಸಿದರು.

ಇಂದು ವನ್ಯಜೀವಿ ಸಪ್ತಾಹ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸರಕಾರದ ಅನುಮತಿ ಕೋರಿ ವ್ಯವಹಾರ ಮಾಡಲಾಗುವುದು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂರ್ತಿ, ಕೊಡಗಿನಲ್ಲಿ ಆನೆಗಳ ಸಂಖ್ಯೆ ಸುಮಾರು ಎಪ್ಪತ್ತರಷ್ಟಿದ್ದು, ಅವುಗಳ ಬಳಕೆ ಇಲ್ಲಿಯ ದಸರಾ ಆಕರ್ಷಣೆಗೂ ಆಗುವುದು ಅರ್ಥಪೂರ್ಣ ಎಂದರು.

ಮನುಷ್ಯ ಮತ್ತು ಜೀವ ಸಂಕುಲಗಳ ಸಂಬAಧ ಪವಿತ್ರವಾಗಿದ್ದು, ಮಾನವನು ಪರಿಸರ, ನೆಲ, ಜಲ ಸಂರಕ್ಷಣೆ ಮಾಡುವುದು ಭೂಮಿ ತಾಯಿಯ ಸೇವೆ ಮಾಡಿದಂತೆ ಎಂದು ವಿವರಿಸಿದರು.

೧೯೪೭ರಲ್ಲಿ ಇದ್ದ ೨೫ ಕೋಟಿ ಜನಸಂಖ್ಯೆ ಭಾರತದಲ್ಲಿ ೧೪೦ ಕೋಟಿಗೆ ಏರಿದ್ದು, ಅರಣ್ಯ ಮತ್ತು ಭೂಮಿಯ ವಿಸ್ತೀರ್ಣ ಅಷ್ಟರಲ್ಲೇ ನಿಂತಿರುವುದರಿAದ ಪ್ರಕೃತಿಯ ಮೇಲೆ ಅಪಾರ ಒತ್ತಡ ಬೀಳುತ್ತಿದೆ ಎಂದರು.

ರಸ್ತೆ, ರೈಲು ಮಾರ್ಗಗಳು, ಕಟ್ಟಡಗಳ ನಿರ್ಮಾಣದಿಂದಾಗಿ ಮರಗಳು ನಾಶವಾಗುತ್ತಿದ್ದು, ಬೆಳವಣಿಗೆಯೊಂದಿಗೆ ಸಂರಕ್ಷಣೆಯೂ ಅತಿಮುಖ್ಯ ಎಂದರು. ಪ್ರಕೃತಿ ವಿಕೋಪದಿಂದ ಜರ್ಝರಿತವಾದ ಕೊಡಗಿನಲ್ಲಿ ಮಣ್ಣಿನ ಸಾಂಧ್ರತೆ ಇನ್ನೂ ಹದಕ್ಕೆ ಬಾರದಿದ್ದು, ಮರ ಕಡಿಯುವುದನ್ನು ನಿಲ್ಲಿಸಬೇಕೆಂದು ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.

(ಮೊದಲ ಪುಟದಿಂದ) ಸವಕಳಿ ಗಿಡ- ಮರಗಳಿಂದ ಭೂಕುಸಿತ ಹೆಚ್ಚುತ್ತದೆ ಎಂದ ಅವರು, ಬೆಳೆಗಾರರು ಹೊರಗಿನ ಸಸಿಗಳನ್ನು ನೆಡದೆ, ಸ್ಥಳೀಯ ಸಸಿಗಳಿಗೆ ಆದ್ಯತೆ ನೀಡಿ ನೆಟ್ಟರೆ, ಭೂಕುಸಿತ, ತಡೆ ಹಾಗೂ ಪ್ರಾಣಿ ಸಂಕುಲಗಳ ಅಭಿವೃದ್ಧಿಗೆ ಸಹಕಾರಿ ಎಂದರು.

ಸಪ್ತಾಹ ಮುಕ್ತಾಯ ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ|| ಸತೀಶ ಅವರು ಮಾತನಾಡಿ, ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ನಿರ್ದಿಷ್ಟ ಕಾರ್ಯಕ್ರಮ ರೂಪಿಸಲು ಸಧ್ಯದಲ್ಲೇ ಸಭೆ ಕರೆಯಲಾಗುವುದು ಎಂದು ಹೇಳಿದರು. ಊಟಿ ಪ್ರವೇಶಿಸುವ ಪ್ರವಾಸಿಗರನ್ನು ದ್ವಾರಗಳಲ್ಲೇ ಪೊಲೀಸರು ತಡೆದು, ಪ್ಲಾಸ್ಟಿಕ್ ಚೀಲ ಹಾಗೂ ನೀರಿನ ಬಾಟಲಿಗಳನ್ನು ಅಲ್ಲಿಯೇ ಬಿಟ್ಟುಹೋಗುವಂತೆ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿಗಳೊಡನೆ ಬಿ.ಜಿ. ಅನಂತಶಯನ, ಅರುಣ್ ಅಪ್ಪಚ್ಚು ಹಾಗೂ ಚೆಯ್ಯಂಡ ಸತ್ಯ ಚರ್ಚಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ಸಂಬAಧಿಸಿದ ಸಂಘ - ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆಯುವುದಾಗಿ ಹೇಳಿದರು.

ಅರಣ್ಯ ಇಲಾಖೆ ತೆರೆದ ವೆಬ್‌ಸೈಟನ್ನು ರಾಜ್ಯ ಪ್ರವಾಸೀ ವೆಬ್‌ಸೈಟ್‌ಗೆ ಜೋಡಿಸುವಂತೆ ತಿಳಿಸಿದರು. ಪ್ರವಾಸಿಗರಿಗೆ ಅನುಕೂಲ ಆಗುವಂತೆ ಜಿಲ್ಲೆಯಲ್ಲಿ ಸೂರ್ಯಾಸ್ಥ ಹಾಗೂ ಸೂರ್ಯೋದಯದ ಸ್ಥಳಗಳ ವಿವರಗಳನ್ನು ನೀಡುವುದು ಅವಶ್ಯ ಎಂದು ಜಿಲ್ಲಾಧಿಕಾರಿ ಸತೀಶ ನುಡಿದರು.

‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಮಾತನಾಡಿ, ವನ್ಯಜೀವಿ ಸಪ್ತಾಹ ಸಂದರ್ಭ ಕೇವಲ ಆನೆ - ಹುಲಿಗಳ ಕುರಿತು ಮಾತನಾಡುವ ನಾವು ಇತರ ಸಂಕುಲಗಳು, ಅವುಗಳ ಉಪಯುಕ್ತತೆಯನ್ನು ಮರೆತಿದ್ದೇವೆ ಎಂದರು. ಋಷಿ- ಮುನಿಗಳ ಕಾಲದಲ್ಲಿ ಕಾಡಿನಲ್ಲಿ ಅವರುಗಳ ಆಶ್ರಮದೆದುರೇ ಹುಲಿ - ಜಿಂಕೆ- ಇತರ ಪ್ರಾಣಿಗಳು ಜೊತೆಯಾಗಿ ಇರುವಂತ ‘ಏಕತ್ವ’ದ ತರಂಗ ಪಸರಿಸುತ್ತಿತ್ತು. ಅಂತರಾಳದಿAದ ನಾವು ಪ್ರಕೃತಿ ಮತ್ತು ಪ್ರಾಣಿ ಸಂಕುಲಗಳನ್ನು ಭಕ್ತಿ ಮತ್ತು ಮುಕ್ತ ಪ್ರೀತಿಯಿಂದ ಕಾಣುವ ದಿನ ಬಂದರೆ ಸಮತೋಲನ ಸಾಧ್ಯ ಎಂದರು.

ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಟಿ.ಜಿ. ಪ್ರೇಂಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ಶಿವರಾಂ ಬಾಬು ಅವರಿಂದ ಸ್ವಾಗತ, ಕಾಂತಿಮತಿ ಅವರಿಂದ ಪ್ರಾರ್ಥನೆ ನೆರವೇರಿತು.

ವೇದಿಕೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಧಾನ ಆಯುಕ್ತರಾದ ಕೆ.ಟಿ. ಬೇಬಿ ಮ್ಯಾಥ್ಯೂ, ಬೆಂಗಳೂರಿನ ಅಡವಿ ವೈಲ್ಡ್ ಅಲರ್ಟ್ ಸಂಸ್ಥೆ ಪವನ್ ಜೋಷಿ, ಕ್ಲಬ್ ಮಹೀಂದ್ರ ರೆಸಾರ್ಟ್ನ ಅರವಿಂದ ಕುಮಾರ್ ಶರ್ಮ, ಮಂಜಪ್ಪ ಇತರರು ಇದ್ದರು. ಅನಿತ ನಿರೂಪಿಸಿದರು.

ಈ ಸಂದರ್ಭ ವೆಬ್‌ಸೈಟ್ ಞoಜಚಿgueಛಿoಣouಡಿism.ಛಿom ನ್ನು ಉದ್ಘಾಟಿಸಲಾಯಿತು. ವೆಬ್‌ಸೈಟ್‌ಗೆ ತೆರಳಿ ಇಲ್ಲಿನ ಚಾರಣ ಬೆಟ್ಟಗಳ ವಿವರ ಪಡೆದು ಬುಕ್ಕಿಂಗ್ ಕೂಡಾ ಮಾಡಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

-ಅನಂತ್.