ಮಡಿಕೇರಿ, ಸೆ. ೪: ಸಮಾಜದ ಅಂಕು-ಡೊAಕುಗಳನ್ನು ತಿದ್ದುವ ಶಕ್ತಿ ಬರಹಗಳಿದೆ. ಅದನ್ನು ಅರಿತು ಲೇಖಕರು ಸೂಕ್ಷö್ಮ ಸಂವೇದನಿ ಗಳಾಗಿರಬೇಕೆಂದು ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಬಹುಭಾಷ ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಅಭಿಮತ ವ್ಯಕ್ತಪಡಿಸಿದರು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಮನದಾಳದ ತುಡಿತಗಳು ಪದಗಳಾಗಿ ಹೊರಬರಬೇಕಾದರೆ. ಕವಿ ಸಮಾಜದ ಪರ ಸಕರಾತ್ಮಕ ಚಿಂತನೆ ಮಾಡಬೇಕು. ವಿಷಯಗಳಿಗೆ ವಿಶಾಲ ಅರ್ಥ ನೀಡಬೇಕು ಎಂದು ಹೇಳಿದ ಅವರು, ಕವಿಗಳು ಕಲಿಕೆಗೆ ಒತ್ತು ನೀಡಬೇಕು. ಓದಿನಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ. ಮಕ್ಕಳಿಗೂ ಓದುವ ಅಭಿರುಚಿ ಬೆಳೆÀಸಬೇಕು ಎಂದು ಕರೆ ನೀಡಿದರು. ಬಳಿಕ ತಂದೆಯ ಬಗ್ಗೆ ಅವರ ಮಗಳು ಬರೆದ ಕವನವನ್ನು ವೇದಿಕೆಯಲ್ಲಿ ಅನಿತಾ ವಾಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ‘ಕಾವ್ಯ ಶರಧಿ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಕವನಗಳು ವಿವಿಧ ಆಯಾಮ ಪಡೆದುಕೊಳ್ಳುತ್ತದೆ. ಓದಿದರೆ ಕವನ ಅದಕ್ಕೆ ರಾಗ ಸಂಯೋಜಿಸಿದರೆ ಹಾಡಾಗಿ ಪರಿವರ್ತನೆಯಾಗುತ್ತದೆ. ಕವಿತೆಗಳು ಪ್ರಾಸಬದ್ಧದ ಜೊತೆಗೆ ಚಿಂತನೆಯಲ್ಲಿ ಕೂಡಿರಬೇಕು. ಯಾವುದೇ ಪರ-ವಿರೋಧವಿಲ್ಲದೆ ವಿಷಯವನ್ನು ಮುಟ್ಟಿಸುವ ಕೆಲಸ ಕವಿಯ ಕರ್ತವ್ಯ ಎಂದು ಹೇಳಿದರು.

ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಹೃದಯಕ್ಕೆ ವಿಷಯ ನಾಟಿದರೆ ಮಾತ್ರ ಅದು ಬರಹಗಳಾಗಿ ಹೊರ ಹೊಮ್ಮುತ್ತದೆ. ವಿಶ್ವದ ಆಗು-ಹೋಗುಗಳನ್ನು ದಾಖಲಿಸಲು ಅನೇಕ ಕಾರ್ಯವಿಧಾನಗಳಿವೆ. ಆದರೆ ಭಾವನೆಗಳನ್ನು ಸೆರೆಹಿಡಿಯಲು ಯಾವುದೇ ಸಲಕರಣೆಗಳಿಲ್ಲ. ಅದಕ್ಕೆ ಬರಹವೊಂದೆ ಸಲಕರಣೆ. ಇಡೀ ಮಹಾಭಾರತವನ್ನು ಕುಮಾರವ್ಯಾಸ ಕಟ್ಟಿಕೊಟ್ಟ ರೀತಿ ಪದಗಳಿಗಿರುವ ಶಕ್ತಿಯನ್ನು ತೋರುತ್ತದೆ. ಮಹಾಕಾವ್ಯ ಓದುವ ಸಂದರ್ಭ ಅಲ್ಲಿ ಸೃಷ್ಟಿಯಾ ಗುವ ಸನ್ನಿವೇಶ, ಭಾವನೆಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಇದು ಬರಹದ ಸಾಮರ್ಥ್ಯ ಎಂದು ಬಣ್ಣಿಸಿದ ಅವರು, ಕವಿ ಹಾಗೂ ಬರಹಗಳನ್ನು ಪ್ರೋತ್ಸಾಹಿಸುವ ವರ್ಗ ಹೆಚ್ಚಾಗಬೇಕೆಂದು ಅಭಿಪ್ರಾಯಿಸಿದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಮಾತನಾಡಿ, ಬರೆದಿದ್ದೆಲ್ಲ ಶ್ರೇಷ್ಠ ಎಂಬ ಭಾವನೆ ದೂರವಾಗಬೇಕು. ಬರೆಯುವುದರ ಜೊತೆ ಹೆಚ್ಚು ಓದಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮುನ್ನ ಅದನ್ನು ನುರಿತರಿಂದ ತಿದ್ದಿ ತೀಡಿಸಿದರೆ ಕಲಿತಂತಾಗುತ್ತದೆ. ಜೊತೆಗೆ ಉತ್ತಮ ಬರಹ ಹೊರಹೊಮ್ಮುತ್ತದೆ ಎಂದು ಸಲಹೆ ನೀಡಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಎಲ್ಲ ಭಾಷೆ ಒಂದೇ ಎಂಬ ಭಾವನೆ ಸೃಷ್ಟಿಯಾದರೆ ಸಾಮರಸ್ಯ ಸಹಜವಾಗಿ ಉಳಿಯುತ್ತದೆ. ಸಾಹಿತ್ಯ ಕೃಷಿಗೆ ಕವಿತೆ ಆರಂಭಿಕ ಮೆಟ್ಟಿಲು ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕವಿಗೋಷ್ಠಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದಲ್ಲದೆ, ಅನುದಾನ ಕೂಡ ನೀಡಬೇಕು. ಸಾಹಿತ್ಯ ಉಳಿದರೆ ಜಿಲ್ಲೆಯ ಬೆಳವಣಿಗೆ ಸಾಧ್ಯವೆಂದು ಹೇಳಿದರು.

ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ಲು ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಗೋಷ್ಠಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಜಿಲ್ಲೆಗಳಿಂದ ಸುಮಾರು ೨೩೦ ಕವಿತೆಗಳು ಬಂದಿದ್ದವು. ಅದನ್ನು ಆಯ್ಕೆ ಸಮಿತಿಗೆ ನೀಡಿ ವಿವಿಧ ಭಾಷೆಯ ೬೫ ಕವಿತೆಗಳನ್ನು ಆಯ್ಕೆಗೊಳಿಸಿದ್ದೇವೆ. ಹಾಗಾಗಿ ಇದನ್ನು ರಾಜ್ಯಮಟ್ಟದ ಕವಿಗೋಷ್ಠಿ ಎಂದು ಪರಿಗಣಿಸಬಹುದಾಗಿದೆ. ಮುಂದಿನ ಬಾರಿಯಿಂದ ರಾಜ್ಯಮಟ್ಟದ ಕವಿಗೋಷ್ಠಿ ನಡೆಸಬಹುದು ಎಂದು ಹೇಳಿದ ಅವರು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಇದರಿಂದ ಸಾಹಿತ್ಯ ಉತ್ತೇಜನಕ್ಕೆ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಶ್ವೇತಾ ಪ್ರಶಾಂತ್, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯೆ ಸಬಿತಾ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ಲು ಕುಶಾಲಪ್ಪ, ಜಾನಪದ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷ ಎಚ್.ಟಿ. ಅನಿಲ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಹಾಜರಿದ್ದರು.

ಎಂ.ಪಿ. ರವಿ ಸ್ವಾಗತಿಸಿ, ಚೋಕಿರ ಅನಿತಾ, ಜಯಲಕ್ಷಿö್ಮ ನಿರೂಪಿಸಿ, ನಾಸಿರ್ ವಂದಿಸಿದರು.