ವೀರಾಜಪೇಟೆ, ಅ. ೪: ಕಾವೇರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾವೇರಿ ಎಜುಕೇಷನ್ ಸೊಸೈಟಿ, ಗೋಣಿಕೊಪ್ಪಲುವಿನ ಅಧ್ಯಕ್ಷ ಪ್ರೊ.ಇಟ್ಟಿರ ಕೆ.ಬಿದ್ದಪ್ಪ ಅವರು ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡು ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಅವರು ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಂಡು ದೇಶಪ್ರೇಮವನ್ನು ಮೈಗೂಡಿಸಿಕೊಂಡು ಸುಭದ್ರ ರಾಷ್ಟç ಕಟ್ಟಲು ಪಣತೊಡಬೇಕೆಂದು ಕರೆನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆಯ ಗಾಯಕ ಅಜಿತ್ ಪೂವಣ್ಣ, ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಮನರಂಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಮಾರಂಭದಲ್ಲಿ ಕಾವೇರಿ ಎಜುಕೇಷನ್ ಸೊಸೈಟಿಯ ನಿರ್ದೇಶಕ ಪಿ.ಟಿ. ಸುಭಾಷ್, ಕಾವೇರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಕಮಲಾಕ್ಷಿ ಬಿದ್ದಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎನ್. ಶಂಕರನಾರಾಯಣ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ದಮಯಂತಿ ಎಂ.ಪಿ. ವಿದ್ಯಾರ್ಥಿ ಸಂಘದ ನಾಯಕರನ್ನು, ತರಗತಿ ಪ್ರತಿನಿಧಿಗಳನ್ನು ಸಭೆಗೆ ಪರಿಚಯಿಸಿದರು. ಹಿರಿಯ ಉಪನ್ಯಾಸಕಿ ಡಯಾನ ಎ.ಎಂ. ವಂದಿಸಿದರು. ವಿದ್ಯಾರ್ಥಿನಿಯರಾದ ಸಾರಮರಿಯಮ್ಮ ಎಂ.ಜೆ, ರಕ್ಷಿತಾ ಬಿ.ಎಸ್, ರಂಜಿತಾ ಮತ್ತು ಸ್ವಪ್ನ ಕಾರ್ಯಕ್ರಮವನ್ನು ನಿರೂಪಿಸಿದರು.