ಮಡಿಕೇರಿ, ಅ. ೨: ಹಲವಷ್ಟು ವೈವಿಧ್ಯಮಯ ಕಾರ್ಯಕ್ರಮ, ಸಂಭ್ರಮಕ್ಕೆ ವೇದಿಕೆಯಾಗಿರುವ ಮಡಿಕೇರಿ ದಸರಾ ಉತ್ಸವದಲ್ಲಿ ಭಾನುವಾರದಂದು ಮಣ್ಣಿನ ಸೊಗಡಿನ ಸಂಸ್ಕೃತಿಯ ಭಾಗವಾಗಿರುವ ಜಾನಪದೀಯ ಕಾರ್ಯಕ್ರಮಗಳು ಮೂಡಿಬಂದು ನೆರೆದಿದ್ದ ಮನಸ್ಸುಗಳಿಗೆ ಮುದ ನೀಡಿದವು.
ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ಆಶ್ರಯದಲ್ಲಿ ಮಡಿಕೇರಿ ದಸರಾ ಸಮಿತಿಯ ಸಹಯೋಗದೊಂದಿಗೆ ಆಯೋಜನೆ ಗೊಂಡಿದ್ದ ಎರಡನೇ ವರ್ಷದ ಜಾನಪದ ದಸರಾ ಉತ್ಸವದಲ್ಲಿ, ಸಂಸ್ಕೃತಿಯ ಕೊಂಡಿಗಳಾಗಿರುವ ಜಾನಪದ ಕ್ರೀಡೆ, ಸಾಹಿತ್ಯ, ನೃತ್ಯ ಪ್ರಾಕಾರ, ಕಲೆಗಳ ಅನಾವರಣ ದಿಂದಾಗಿ ಜಾನಪದ ಮನಸ್ಸುಗಳು ಸಂಭ್ರಮಿಸಿದವು.
ಸಭಾ ಕಾರ್ಯಕ್ರಮದ ಉದ್ಘಾಟನೆಯಿಂದ ಹಿಡಿದು ಕೊನೆಯ ಕಾರ್ಯಕ್ರಮದವರೆಗೂ ಜಾನಪದದ ಪ್ರಭಾವಳಿ ಕಂಡುಬAತು. ಕಾರ್ಯಕ್ರಮ ವನ್ನು ಪರೆಯಲ್ಲಿ ಭತ್ತ ತಳ್ಳುವ ಹಾಗೂ ಡೋಲು ಬಡಿಯುವ ಮೂಲಕ ಪರಿಷತ್‌ನ ರಾಜ್ಯಾಧ್ಯಕ್ಷ ಹಿ. ಶಿ. ರಾಮಚಂದ್ರೇಗೌಡ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳು ಉದ್ಘಾಟಿಸಿದರು.
ಈ ಸಂದರ್ಭ ಹಿನ್ನೆಲೆಯಲ್ಲಿ ಸೋಬಾನೆ ಪದ, ರಾಗಿ ಬೀಸುವ, ಭತ್ತ ಕುಟ್ಟುವ ಪ್ರಾತ್ಯಕ್ಷಿಕೆ ಮೂಡಿಬಂದು ಉದ್ಘಾಟನೆಯ ಮೆರುಗನ್ನು ಹೆಚ್ಚಿಸಿತ್ತು. ಜಾನಪದ ಪರಿಷತ್ತಿನ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಜಾನಪದೀಯ ಕಲಾ ಪ್ರಾಕಾರಗಳು ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸಿತು.
ಇದರೊAದಿಗೆ ಅಳಿವಿನಂಚಿಗೆ ಬಹುತೇಕ ತಳ್ಳಲ್ಪಟ್ಟಿರುವ ಜಾನಪದ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಅವುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ನಡೆಯಿತು. ಗೋಣಿ ಚೀಲ ಓಟ, ಮಡಿಕೆ ಒಡೆಯುವುದು, ಬುಗುರಿಯಾಟ, ಮೂರು ಕಾಲಿನ ಓಟ, ಚಿನ್ನಿದಾಂಡು, ಗೋಲಿ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಾನಪದ ಬದುಕಿನ ಭಾಗವಾಗಿದ್ದ, ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಗೃಹೋಪ ಯೋಗಿ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಜಿಲ್ಲೆಯ ಜಾನಪದ ಕಲಾಸಕ್ತರಾದ ಕಿಗ್ಗಾಲು ಹರೀಶ್ ಹಾಗೂ ಬೈತಡ್ಕ ಜಾನಕಿ ಅವರುಗಳ ಸಂಗ್ರಹದಲ್ಲಿದ್ದ ಹಳೆಯ ಕಾಲದ ಪರಿಕರಗಳನ್ನು ಪ್ರದರ್ಶಿಸಲಾಯಿತು.
ನೂಜಿ ಹುಲ್ಲಿನ ತಟ್ಟೆ, ಅರಶಿಣ ಕುಂಕುಮ ಡಬ್ಬಿ, ನೊಗ, ವಾಟೆಯಲ್ಲಿ ತಯಾರಿಸಿದ ಮೊರ, ಮರದ ಒನಕೆ, ವಾಲೆ ತಟ್ಟೆ, ಬರಂಜಿ, ಅಕ್ಕಿ ಕೊಮ್ಮೆ, ಬೆತ್ತದಲ್ಲಿ ತಯಾರಿಸಿದ ಏಲಕ್ಕಿ ಸಂಗ್ರಹಣ ಬುಟ್ಟಿ, ನೇಗಿಲು, ಮೀನು ಹಿಡಿಯುವ ಪೊಡ, ನೂಪುಟ್ಟು ಯಂತ್ರ, ಬೋಗುಣಿ, ಪರೆ, ಪೀಚೆ ಕತ್ತಿ, ಒಡಿಕತ್ತಿ, ತಕ್ಕಡಿ, ಮುಟ್ಟಾಳೆ, ಕಾಫಿ ಬೀಜಗಳನ್ನು ಒಣಗಿಸುತ್ತಿದ್ದ ಯಂತ್ರ, ತಾಮ್ರ, ಕಂಚಿನ ಪರಿಕರಗಳು, ಅಕ್ಕಿ ಹುಡಿ ಮಾಡುವ ಯಂತ್ರ, ಅಳಿಗುಳಿಮನೆ, ತೆಂಗಿನ ಕರಟದಿಂದ ತಯಾರಿಸಿದ ಸೌಟು, ತಾಮ್ರದ ಭಂಡಾರ ಪೆಟ್ಟಿಗೆ, ಕಬ್ಬಿಣದ ಇಕ್ಕಳ, ಹಳೆ ಕಾಲದ ಟೆಲಿಫೋನ್, ಇಸ್ತಿç ಪೆಟ್ಟಿಗೆ, ಸೇರು, ರೈಲ್ ಚೆಂಬು ಸೇರಿದಂತೆ ಇನ್ನಿತರ ವಸ್ತುಗಳು ಗಮನ ಸೆಳೆದವು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಜಾನಪದ ನೃತ್ಯ, ಹಾಡುಗಾರಿಕೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟನೆ
ಜಾನಪದ ದಸರಾ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ
(ಮೊದಲ ಪುಟದಿಂದ) ಪ್ರೊ ಹಿ.ಶಿ. ರಾಮಚಂದ್ರೇಗೌಡ ಅವರು ಉದ್ಘಾಟಿಸಿ ಮಾತನಾಡಿ, ಜಾನಪದ ಎಂದರೆ ಸರ್ವರಿಗೂ ಹಿತವಾಗುವ ಸೃಷ್ಟಿಯಾಗಿದೆ. ಹಾಡು, ಕುಣಿತ, ಸಾಹಿತ್ಯ, ಕಥೆ ಎಲ್ಲವನ್ನೂ ಜಾನಪದ ಒಳಗೊಂಡಿದೆ ಎಂದರು.
ಇAದಿನ ದಿನಮಾನದಲ್ಲಿ ಜೀವನದ ಚೈತನ್ಯಕ್ಕೆ ಸ್ಪೂರ್ತಿಯಾಗುವ ಸಾಧಕರನ್ನು ಬಿಟ್ಟು ಸಿನಿಮಾದವರನ್ನು ನಾಯಕ ಎನ್ನುವ ಮನಸ್ಥಿತಿ ಇದೆ. ನಮ್ಮ ಮೂಲ ಸಂಸ್ಕೃತಿಯ ಆಧಾರ ಕಳೆದುಕೊಂಡರೆ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಈ ಹಿನ್ನೆಲೆ ನಾಗೇಗೌಡ ಅವರು ಗ್ರಾಮೀಣ ಸಾಂಸ್ಕೃತಿಕ ಮೊದಲ ಪ್ರತಿನಿಧಿಯಾಗಿ ಜಾನಪದ ಲೋಕವನ್ನು ರಾಮನಗರ ಬಳಿ ನಿರ್ಮಾಣ ಮಾಡಿದ್ದಾರೆ. ಎಲ್ಲರೂ ಇಲ್ಲಿಗೆ ಭೇಟಿ ನೀಡಿ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಅರಿತುಕೊಳ್ಳುವಂತಾಗಬೇಕು ಎಂದರು.
ಜಾನಪದ ಗೀತೆ ಹಾಡುವುದು ಮಾನಸಿಕ ಚಿಕಿತ್ಸೆಯಷ್ಟೇ ಉಪಯೋಗಕಾರಿ ಎಂದು ವಿಶ್ಲೇಷಿಸಿದ ಅವರು, ನಾವುಗಳು ಪರಕೀಯತೆಯಿಂದ ಹೊರಬಂದು ಸ್ವಕೀಯರಾಗಬೇಕು. ಗ್ರಾಮೀಣ ಸಂಸ್ಕೃತಿಯ ಹೆಗ್ಗುರುತು ತಾಯಿ. ತಾಯಿಯ ಸಂಸ್ಕೃತಿಯಲ್ಲಿ ಬೆಳೆದ ಮಕ್ಕಳು ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದು ಅಭಿಪ್ರಾಯಿಸಿದರು.
ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಮಣ್ಣಿನ ಮೂಲ ಸತ್ವದಂತಿರುವ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಬಾರದು. ಇದರೊಂದಿಗೆ ಸಣ್ಣಪುಟ್ಟ ಜನಾಂಗದ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.
ಕೃಷಿ ಪದ್ಧತಿ ನಶಿಸದಂತೆ ಎಚ್ಚರ ವಹಿಸಬೇಕು. ಯುವ ಜನಾಂಗಕ್ಕೆ ಇದರ ಬಗ್ಗೆಯೂ ಆಸಕ್ತಿ ಮೂಡಿಸಬೇಕು ಎಂದ ರಂಜನ್, ಮಕ್ಕಳಿಗೆ ಎಳೆಯ ವಯಸ್ಸಿನಿಂದಲೂ ಸಂಸ್ಕೃತಿ, ಕಲೆ, ಆಚಾರ, ವಿಚಾರಗಳ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಮನೆಗಳಿಂದ ಆಗಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು, ಹೃದಯದಿಂದ ವ್ಯಕ್ತವಾಗುವ ಜಾನಪದವು ಮಾತು, ಆಚಾರ ವಿಚಾರ, ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿದೆ. ಅನಾದಿ ಕಾಲದಿಂದಲೂ ಹರಿದುಬಂದಿರುವ ಜಾನಪದವನ್ನು ಅಳಿವಿನಿಂದ ಉಳಿವಿಗೆ ಕೊಂಡೊಯ್ಯುವ ಕಾರ್ಯವನ್ನು ಪರಿಷತ್ ಮಾಡುತ್ತಿದೆ ಎಂದರು.
ಕಳೆದ ೨೦೧೬ರಿಂದ ಜಿಲ್ಲೆಯಲ್ಲಿ ಆರಂಭಗೊAಡ ಪರಿಷತ್, ಎಲ್ಲಾ ತಾಲೂಕು ಮತ್ತು ಬಹುತೇಕ ಹೋಬಳಿಗಳಲ್ಲಿ ಘಟಕಗಳನ್ನು ಹೊಂದಿದೆ. ಜಿಲ್ಲೆಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಜಾನಪದವು ಜಾತಿ-ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲರೂ ಜಾನಪದೀಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ಮಡಿಕೇರಿ ನಗರ ಸಭೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಜಾನಪದ ಸಾಹಿತ್ಯ ಬೆಳೆಯುವಲ್ಲಿ ಮಹಿಳೆಯರ ಪಾತ್ರ ಮುಖ್ಯ. ಜಾನಪದವನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಉಳಿದಿದೆ. ಪಟ್ಟಣ ಪ್ರದೇಶದಲ್ಲಿ ಮರೆಯಾಗುತ್ತಿರುವುದು ಖೇದಕರ. ಜಾನಪದ ಪುಸ್ತಕ ಮತ್ತು ಸಿ.ಡಿ.ಗಳಿಗೆ ಸೀಮಿತವಾಗದೆ ಜೀವನದ ಭಾಗವಾಗಬೇಕು ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮದಲ್ಲಿ ರಾಮಚಂದ್ರೇಗೌಡ ಹಾಗೂ ನಾಗಚಂದ್ರ ಕುಮಾರಿ ದಂಪತಿಗಳನ್ನು ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ನಗರಸಭೆ ಹಾಗೂ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ವಿವಿಧ ಮಂಟಪ ಸಮಿತಿಗಳ ಅಧ್ಯಕ್ಷರುಗಳಾದ ನಂದಾ ಉತ್ತಪ್ಪ, ತಿಮ್ಮಯ್ಯ, ಚಂದ್ರ, ಉಮೇಶ್, ಪರಿಷತ್‌ನ ತಾಲೂಕು ಮತ್ತು ಹೋಬಳಿ ಘಟಕಗಳ ಅಧ್ಯಕ್ಷರುಗಳಾದ ಹೆಚ್.ಟಿ. ಅನಿಲ್, ನಾ ಕನ್ನಡಿಗ ಟೋಮಿ, ದಿಲನ್ ಪೊನ್ನಪ್ಪ, ಸುಜಲಾದೇವಿ, ಕೆ.ಎ. ಪ್ರಕಾಶ್, ಚಂದ್ರಮೋಹನ್, ಚೆರಿಯಮನೆ ಗಾಯತ್ರಿ, ಜಿಲ್ಲಾ ಕಾರ್ಯದರ್ಶಿ ಉಜ್ವಲ್ ರಂಜಿತ್, ದಸರಾ ಸಮಿತಿ ಖಜಾಂಚಿ ಶ್ವೇತಾ ಪ್ರಶಾಂತ್ ಸೇರಿದಂತೆ ಸದಸ್ಯೆ ಸಬಿತಾ ಇತರರು ಉಪಸ್ಥಿತರಿದ್ದರು.
- ವಿಜಯ್ ಹಾನಗಲ್