ಮಡಿಕೇರಿ, ಅ. ೩: ವಿಜಯದಶಮಿಯಂದು ದಶಮಂಟಪಗಳ ತೀರ್ಪುಗಾರಿಕೆಯನ್ನು ಬೆಳಿಗ್ಗೆ ೪ ಗಂಟೆಯ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಂಪ್ರತಿ ತೀರ್ಪುಗಾರಿಕೆಯಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಗೊಂದಲಗಳ ನಿವಾರಣೆಗೂ ಈ ಬಾರಿ ಚಿಂತನೆ ಹರಿಸಲಾಗಿದ್ದು, ಪ್ರತಿ ಮಂಟಪಗಳಿಗೆ ತೀರ್ಪಿನ ಸಮಯ ಮತ್ತು ಸ್ಥಳವನ್ನು ಸೂಚಿಸಲಾಗಿದೆ.

(ಮೊದಲ ಪುಟದಿಂದ) ಸೂಚಿತ ಸಮಯಕ್ಕೆ ಆಯಾ ಮಂಟಪಗಳು ಆಯಾ ಸ್ಥಳಗಳಿಗೆ ಬಾರದೆ ಇದ್ದಲ್ಲಿ ಅವುಗಳಿಗೆ ನೀಡುವ ಅಂಕಗಳನ್ನು ಕಡಿತಗೊಳಿಸುವ ಮಹತ್ವದ ನಿರ್ಣಯವನ್ನೂ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು.

ಈ ಬಾರಿ ಪ್ರತಿ ಮಂಟಪಗಳು ತಮ್ಮ ಶೋಭಾಯಾತ್ರೆಯ ಸಂದರ್ಭ ಕನಿಷ್ಟ ೩ ರಿಂದ ೪ ಪ್ರದರ್ಶನಗಳನ್ನು ನೀಡಲಿದೆ ಎಂದು ಮಾಹಿತಿಯನ್ನಿತ್ತರು.

ಸಮಿತಿಯ ಕಾರ್ಯಾಧ್ಯಕ್ಷ ಎ.ಆರ್. ಮಂಜುನಾಥ್ ಮಾತನಾಡಿ, ಈ ಬಾರಿ ದಶಮಂಟಪಗಳು ತೀರ್ಪಿನ ಸಂದರ್ಭ ಇರಬೇಕಾದ ಸ್ಥಳಗಳನ್ನು ಈಗಾಗಲೆ ಗುರುತಿಸಲಾಗಿದೆ. ಪ್ರತಿ ಮಂಟಪಕ್ಕೆ ಸಂಬAಧಿಸಿದAತೆ ಕಥಾ ಸಾರಾಂಶ ಮತ್ತು ಕಲಾಕೃತಿ, ಪ್ರಭಾವಳಿ ಮತ್ತು ಸ್ಟುಡಿಯೋ, ಧ್ವನಿಮುದ್ರಣ, ಶುಚಿತ್ವ ಮತ್ತು ಸಮಯ ಪಾಲನೆ, ಚಾಲನೆ ಮತ್ತು ಟ್ರಾö್ಯಕ್ಟರ್ ಸೆಟ್ಟಿಂಗ್ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ನಾಲ್ಕು ಮಂದಿ ತೀರ್ಪುಗಾರರು ಒಟ್ಟು ನೂರು ಅಂಕಗಳಿಗೆ ತಮ್ಮ ತೀರ್ಪನ್ನು ಆಯಾ ಮಂಟಪಗಳ ತೀರ್ಪಿನ ಬಳಿಕ, ಮಂಟಪ ಸಮಿತಿಯ ಅಧ್ಯಕ್ಷರ ಸಹಿಯೊಂದಿಗೆ ಡಬ್ಬಕ್ಕೆ ಹಾಕುವ ವ್ಯವಸ್ಥೆ ಮಾಡಲಾಗಿದೆಯೆಂದು ಮಾಹಿತಿಯನ್ನಿತ್ತರು.

ಶ್ರೀ ಪೇಟೆ ಶ್ರೀರಾಮ ಮಂದಿರದ ಮಂಟಪದ ತೀರ್ಪು ರಾತ್ರಿ ೧೦ ಗಂಟೆಗೆ ಗಾಂಧಿ ಮೈದಾನದ ಕಾಫಿ ಕೃಪ ಕಟ್ಟಡದ ಬಳಿ, ದೇಚೂರು ಶ್ರೀ ರಾಮಮಂದಿರ ಮಂಟಪದ ತೀರ್ಪು ಆಂಜನೇಯ ದೇವಾಲಯದ ಮುಂಭಾಗ ರಾತ್ರಿ ೧೧ ಗಂಟೆಗೆ, ಶ್ರೀ ದಂಡಿನ ಮಾರಿಯಮ್ಮ ಮಂಟಪದ ತೀರ್ಪು ರಾತ್ರಿ ೩ ಗಂಟೆಗೆÀ ನಗರ ಪೊಲೀಸ್ ಠಾಣೆ ಮುಂಭಾಗ, ಶ್ರೀ ಚೌಡೇಶ್ವರಿ ದೇಗುಲದ ಮಂಟಪಕ್ಕೆ ಹೊಟೇಲ್ ಪಾಪ್ಯುಲರ್ ಮುಂಭಾಗ ರಾತ್ರಿ ೧೧.೪೫ ಗಂಟೆಗೆ, ಶ್ರೀ ಕಂಚಿಕಾಮಾಕ್ಷಿ ಮಂಟಪಕ್ಕೆ ವಿನೋದ್ ಮೆಡಿಕಲ್ಸ್ ಮುಂಭಾಗ ರಾತ್ರಿ ೩.೩೦ ಗಂಟೆೆಗೆ, ಶ್ರೀ ಚೌಟಿ ಮಾರಿಯಮ್ಮ ಮಂಟಪಕ್ಕೆ ಬೆಳಿಗ್ಗೆ ೪ ಗಂಟೆಗೆ ಕಾವೇರಿ ಕಲಾಕ್ಷೇತ್ರ ಮುಂಭಾಗ, ಶ್ರೀ ಕೋಟೆ ಮಾರಿಯಮ್ಮ ಮಂಟಪಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ರಾತ್ರಿ ೧.೪೫ ಗಂಟೆಗೆ, ಶ್ರೀ ಕೋದಂಡರಾಮ ಮಂಟಪಕ್ಕೆ ಬಾಟಾ ಶೋ ರೂಂ ಮುಂಭಾಗ ರಾತ್ರಿ ೧.೧೫ ಗಂಟೆಗೆ, ಶ್ರೀ ಕೋಟೆ ಗಣಪತಿ ಮಂಟಪಕ್ಕೆ ನಗರ ಪೊಲೀಸ್ ಠಾಣೆ ಮುಂಭಾಗ ರಾತ್ರಿ ೧೨.೩೦ ಗಂಟೆಗೆ, ಶ್ರೀ ಕರವಲೆ ಭಗವತಿ ಮಂಟಪಕ್ಕೆ ರಾತ್ರಿ ೨.೩೦ ಗಂಟೆಗೆ ಸಿಂಧೂರ್ ಬಟ್ಟೆ ಮಳಿಗೆ ಮುಂಭಾಗ ಸ್ಥಳವನ್ನು ನಿಗದಿಪಡಿಸಲಾಗಿದೆಯೆಂದು ತಿಳಿಸಿದರು.

ಗೋಷ್ಠಿಯಲ್ಲಿ ದಶಮಂಟಪ ಸಮಿತಿ ಉಪಾಧ್ಯಕ್ಷ ಸಿ.ಪಿ. ಹೇಮಕುಮಾರ್, ಪ್ರಧಾನ ಸಲಹೆಗಾರ ಕೆ.ಕೆ. ದಾಮೋದರ್, ಕುಂದುರುಮೊಟ್ಟೆ ದಸರಾ ಮಂಟಪ ಸಮಿತಿ ಅಧ್ಯಕ್ಷ ನಂದಾ ಉತ್ತಪ್ಪ ಹಾಜರಿದ್ದರು.