ಮಡಿಕೇರಿ, ಅ. ೨: ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಾ. ೪ ಹಾಗೂ ೫ ರಂದು ಜಿಲ್ಲೆಗೆ ಆಗಮಿಸುವುದು ಬಹುತೇಕ ಖಚಿತಗೊಂಡಿದ್ದು, ಈ ನಿಟ್ಟಿನಲ್ಲಿ ಖಾಸಗಿ ರೆಸಾಟ್‌ನಲ್ಲಿ ವಿಲ್ಲಾವೊಂದನ್ನು ೨ ದಿನಕ್ಕೆ ಕಾಯ್ದಿರಿಸಲಾಗಿದೆ.

ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಪಾದಾಯಾತ್ರೆಯನ್ನು ದಸರಾ ಹಿನ್ನೆಲೆ ೨ ದಿನಗಳ ಕಾಲ ಮುಂದೂಡಿದ ಕಾರಣ ಅವರು ಹಾಗೂ ತಾಯಿ ಸೋನಿಯಾ ವಿಶ್ರಾಂತಿ ಪಡೆಯಲು ಮೇಕೇರಿಯ ಖಾಸಗಿ ರೆಸಾರ್ಟ್ಗೆ ಬರಲಿದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಹಿನ್ನೆಲೆ ಕೊಠಡಿ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ 'ಶಕ್ತಿ'ಗೆ ತಿಳಿಸಿದ್ದಾರೆ.

ಇದು ತೀರ ಖಾಸಗಿ ಕಾರ್ಯಕ್ರಮವಾಗಿರುವ ಹಿನ್ನೆಲೆ ಕಾರ್ಯಕರ್ತರನ್ನು ಭೇಟಿಯಾಗುವುದಿಲ್ಲ. ಜಿಲ್ಲಾ ಕಾಂಗ್ರೆಸ್‌ನ ಆಯ್ದ ನಾಯಕರನ್ನು ಭೇಟಿ ಮಾಡಿ ಕೆಲಕಾಲ ಮಾತನಾಡಬಹುದು. ಅವರಿಗೆ ಸೂಕ್ತ ಭದ್ರತೆಗೂ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕೊನೆ ಗಳಿಗೆಯಲ್ಲಿ ಅಥವಾ ಭದ್ರತಾ ದೃಷ್ಟಿಯಲ್ಲಿ ಭೇಟಿ ರದ್ದು ಕೂಡ ಆಗಬಹುದು ಎಂದು ಹೇಳಿದ್ದಾರೆ.