ನಾಪೋಕ್ಲು, ಅ. ೩: ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ನವ ನವೀನ ವಂಚನೆಗಳು, ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಪೊಲೀಸ್ ಇಲಾಖೆ ಅದನ್ನು ಬೇಧಿಸುತ್ತಿದ್ದರೂ, ಅದರ ಅಂತರ, ಆಳ, ವಿಸ್ತಾರಗೊಳ್ಳುತ್ತಲೇ ಇದೆ. ಜನ ಎಷ್ಟೇ ಬುದ್ಧಿವಂತಿಕೆ ತೋರಿದರೂ ವಂಚಕರು ದಿನ ದಿನಕ್ಕೆ ವಿಭಿನ್ನ ಮಾದರಿಯ ತಂತ್ರಗಳಿAದ ಅಮಾಯಕರನ್ನು ವಂಚಿಸುತ್ತಲೇ ಇದ್ದಾರೆ. ಬಹುತೇಕ ಜನ ಹಣ ಕಳೆದುಕೊಂಡು ಮನದಲ್ಲಿಯೇ ಕೊರಗುತ್ತಿದ್ದಾರೆ. ಅಪರೂಪಕ್ಕೆ ಕೆಲವು ಪ್ರಕರಣಗಳು ಮಾತ್ರ ಬಹಿರಂಗಗೊಳ್ಳುತ್ತವೆೆ.
ಇದಕ್ಕೆ ಮತ್ತೊಂದು ಸೇರ್ಪಡೆ ವಂಚನೆಗೊಳಗಾದ ಸಮೀಪದ ನೆಲಜಿ ಗ್ರಾಮದ ದಂಪತಿ. ಫೇಸ್‌ಬುಕ್‌ನಲ್ಲಿ ಪರಿಚಯವಾದವನ ಮೋಸಕ್ಕೆ ಬಲಿಯಾಗಿ ೩೫,೩೮,೦೦೦ ರೂ. ಕಳೆದುಕೊಂಡಿರುವದು. ಈ ಬಗ್ಗೆ ವಂಚನೆಗೊಳಗಾದ ದಂಪತಿ. ಮಡಿಕೇರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮೋಸಗಾರರ ಪತ್ತೆಗೆ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.
ಎರಡು ತಿಂಗಳುಗಳ ಹಿಂದೆ ಮನೆಯ ಯಜಮಾನಿಯ ಫೇಸ್‌ಬುಕ್ ಖಾತೆಗೆ ಬಿರತು ಯಡೆತಾ ಎಂಬ ಹೆಸರಿನ ಫೇಸ್‌ಬುಕ್ ಖಾತೆಯ ವ್ಯಕ್ತಿ ಪರಿಚಯವಾಗುತ್ತಾನೆ. ಮೊದಲಿಗೆ ಆತ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ತಾನು ವೇಲ್ಸ್ ದೇಶದಲ್ಲಿ ಇರುವದಾಗಿ ಹೇಳಿ ಇವರ ವಾಟ್ಸಾಪ್ ನಂಬರ್ ಪಡೆದು ಸಂದೇಶಗಳನ್ನು ಕಳುಹಿಸುತ್ತಾನೆ. ಕೆಲವು ದಿನಗಳ ನಂತರ ಆತನು ನಿಮಗೆ ಉಡುಗೊರೆ ಕಳುಹಿಸುವದಾಗಿ ಹೇಳಿ, ಉಡುಗೊರೆ ಪಾರ್ಸಲ್ ಕಳುಹಿಸಿದ್ದ ಸ್ವೀಕೃತಿಯನ್ನು ವಾಟ್ಸಪ್‌ನಲ್ಲಿ ಕಳುಹಿಸಿದ್ದಾನೆ. ಆ. ೨೦ರಂದು ಯಜಮಾನಿಯ ಮೊಬೈಲ್‌ಗೆ ಕರೆಮಾಡಿದ ಅಪರಿಚಿತ ವ್ಯಕ್ತಿ, ನಾನು ದಿಲ್ಲಿ ಕಸ್ಟಮ್ಸ್ನಿಂದ ಕರೆ ಮಾಡುತ್ತಿರುವದಾಗಿ ಹೇಳಿದ್ದು, ನಿಮಗೆ ಉಡುಗೊರೆ ಪಾರ್ಸಲ್ ಬಂದಿರುತ್ತದೆ, ಅದರೊಳಗೆ ಡಾಲರ್ ಇದೆ. ಅದನ್ನು ಪಡೆದುಕೊಳ್ಳಬೇಕಾದರೆ ಭಾರತ ದೇಶದ ತೆರಿಗೆ ಮತ್ತು ಕಸ್ಟಮ್ ಶುಲ್ಕವನ್ನು ಪಾವತಿಸಬೇಕು ಎಂದು ತಿಳಿಸಿದ್ದಾರೆ. ಅದನ್ನು ನಂಬಿದ ದಂಪತಿ ಆತ ನೀಡಿದ ಎಸ್‌ಬಿಐ ಬ್ಯಾಂಕ್ ಖಾತೆಗೆ ಮೊದಲಿಗೆ ೩,೮೩,೦೦೦ ರೂ., ನಂತರ ಗೂಗಲ್ ಪೇ ಸೇರಿದಂತೆ ಇತರ ಬ್ಯಾಂಕ್ ಖಾತೆಗಳಿಂದ ಲಕ್ಷ ಲಕ್ಷ ರೂ.ಗಳನ್ನು ಹಂತ ಹಂತವಾಗಿ ಕಳುಹಿಸಿದ್ದು, ಒಟ್ಟು ಕಳುಹಿಸಿದ ಹಣದ ಮೊತ್ತ ೩೫,೩೮,೦೦೦ ರೂ.ಗಳಾಗಿದೆ. ಹಣ ಸಂಪೂರ್ಣ ಖಾಲಿಯಾದ ನಂತರ ತಾವು ಮೋಸ ಹೋಗಿರುವ ವಿಚಾರ ದಂಪತಿಗಳಿಗೆ ತಿಳಿದು ಠಾಣೆಗೆ ದೂರು ನೀಡಿದ್ದಾರೆ. ಇನ್ನಾದರೂ ಜನ ವಂಚಕರ, ಫೇಸ್‌ಬುಕ್ ಮತ್ತು ಇತರ ಜಾಲತಾಣಗಳ ಗೆಳೆತನದ ಆಮಿಷಕ್ಕೆ ಒಳಗಾಗಬಾರದು ಎಂಬುದನ್ನು ಇಂತಹ ಪ್ರಕರಣಗಳಿಂದ ಎಲ್ಲರೂ ಅರಿಯಬೇಕಾಗಿದೆ.
-ಪಿ.ವಿ.ಪ್ರಭಾಕರ್