ಮಡಿಕೇರಿ, ಅ. ೨: ಸಾಹಿತ್ಯ ಸಂಗೀತ ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಮನದಾಳದ ಭಾವನೆಗಳ ಹಬ್ಬವಾಗಬೇಕು ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಸಂಸ್ಥಾಪಕ ಮತ್ತು ಅಧ್ಯಕ್ಷ, ಚಾಮೆರ ದಿನೇಶ್ ಬೆಳ್ಯಪ್ಪ ಅವರು ಅಭಿಪ್ರಾಯಿಸಿದರು. ಅಮರಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಜನ್ಮದಿನದ ನೆನಪಿನಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ಆಯೋಜಿಸಿದ ವರ್ಚುವಲ್ ಲೈವ್ ಹಾಡುಗಾರಿಕೆ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಯಾವುದೇ ಸ್ಪರ್ಧೆಯಾದರೂ ಅದು ನಮ್ಮೊಳಗಿನ ಹುಮ್ಮಸ್ಸನ್ನು ಇಮ್ಮಡಿಗೊಳಿಸ ಬೇಕಲ್ಲದೆ, ಕೇವಲ ಪ್ರಶಸ್ತಿ ಪಡೆಯಲಷ್ಟೇ ಸೀಮಿತವಾಗಬಾರದು. ಅದರಲ್ಲೂ ಸಂಗೀತ, ಸಾಹಿತ್ಯದಂತಹ ಸ್ಪರ್ಧೆಗಳು ನಮ್ಮನ್ನು ಉಲ್ಲಾಸಭರಿತ ರನ್ನಾಗಿ ಮಾಡಿ, ಆ ಕ್ಷಣವನ್ನು ಆಸ್ವಾದಿಸಿ ಅನುಭವಿಸುವಂತಿರಬೇಕು, ಮತ್ತು ಪ್ರತಿಯೊಬ್ಬ ಸ್ಪರ್ಧಿಯೂ ಎದುರಾಳಿಯ ಗಾಯನವನ್ನು ಆಸ್ವಾದಿಸಬೇಕು. ಹಾಗಾದಾಗ ಮಾತ್ರ ಸ್ಪರ್ಧೆಯು ಸಂಭ್ರಮವಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ೩೩ ಸ್ಪರ್ಧಿಗಳು ಹಿರಿಯ ಸಾಹಿತಿಗಳಾದ ಅಪ್ಪನೆರವಂಡ ಅಪ್ಪಚ್ಚ, ಐ.ಮಾ. ಮುತ್ತಣ್ಣ, ತೋನಾಚಂ, ಮುಲ್ಲೆರ ಜಿಮ್ಮಿ ಅಯ್ಯಪ್ಪ, ಚಕ್ಕೆರ ತ್ಯಾಗರಾಜ ಅಪ್ಪಯ್ಯ, ಆಪಾಡಂಡ ಜಗ ಮೊಣ್ಣಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಬಾಚರಣಿಯಂಡ ಅಪ್ಪಣ್ಣ ಅವರುಗಳ ಸಾಹಿತ್ಯವನ್ನು ಹಾಡಿ ಸಂಭ್ರಮಿಸಿದರು. ಸ್ಪರ್ಧೆಯ ವಿಜೇತರಾಗಿ ಪ್ರಥಮ ಸ್ಥಾನವನ್ನು ಚೆಟ್ಟಿರ ಗ್ರಂಥ ಕಾರ್ಯಪ್ಪ, ದ್ವಿತೀಯ ಇಟ್ಟಿರ ನಿಖಿಲ್ ನಾಚಪ್ಪ, ತೃತೀಯ ಮಾದೆಯಂಡ ಪ್ರೀತಿ ಪೊನ್ನಮ್ಮ ಅವರುಗಳು ಪಡೆದುಕೊಂಡರು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳು ಸಂಗೀತಕಾರರು ಗಾಯಕರುಗಳಾದ, ಕಂಬೆಯAಡ ದೇವಯ್ಯ, ಪಳಂಗAಡ ರೀಟಾ ನಾಚಪ್ಪ, ಅಮ್ಮಂಡ ಹರೀಶ್ ಅವರು ಜವಾಬ್ದಾರಿ ನಿಭಾಯಿಸಿದರು. ಸ್ಪರ್ಧೆಯ ನಗದು ಮತ್ತು ಅಭಿನಂದನ ಪತ್ರವನ್ನು ಬಲಂಬೇರಿ ಮೂಲದ ಬೆಂಗಳೂರು ನಿವಾಸಿ ಪಾಲಂದಿರ ಜೋಯಪ್ಪ ಅವರು ಪ್ರಾಯೋಜಿಸಿದರು. ಕಾರ್ಯಕ್ರಮದ ಮೊದಲಿಗೆ ಕೊಡವ ಪದ್ಧತಿಯಂತೆ ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯ ಚೆನಿಯಪಂಡ ಮನು ಮಂದಣ್ಣ ನೆಲ್ಲಕ್ಕಿಯಲ್ಲಿ ಅಕ್ಕಿ ಹಾಕಿ ನೇರ್ಚೆ ಕಟ್ಟುವುದರೊಂದಿಗೆ ಚಾಲನೆ ನೀಡಲಾಯಿತು. ಸ್ಪರ್ಧಾ ಸಂಚಾಲಕಿ ಹಾಗೂ ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕಿ ಚಾಮೆರ ಪ್ರಿಯಾ ದಿನೇಶ್ ಅವರ ಉಪಸ್ಥಿತಿಯಲ್ಲಿ, ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ನಿರ್ವಹಿಸಿದರು.