ಶನಿವಾರಸಂತೆ, ಅ. ೩: ಮನುಷ್ಯ ಜೀವನದಲ್ಲಿ ಆರೋಗ್ಯವೇ ಭಾಗ್ಯವಾಗಿದ್ದು, ಬಯಸಿ ಬರುವಂತದ್ದಲ್ಲವಾದ ಕಾರಣ ಕಾಳಜಿ ಮುಖ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಪಿ. ಜಯಕುಮಾರ್ ಅಭಿಪ್ರಾಯಪಟ್ಟರು.

ಸಂಸ್ಥೆ ವತಿಯಿಂದ ಏರಿ ರೆಸಾರ್ಟ್ನಲ್ಲಿ ನಡೆದ ಆರೋಗ್ಯ ಸಿರಿ ಜಿಲ್ಲಾ ಯೋಜನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಿರಿ ಯೋಜನೆಯಡಿ ಮಧುಮೇಹ ಕಾಯಿಲೆಗೆ ಒಳಗಾಗಿರುವ ೨ ಬಡ ಕುಟುಂಬದ ಇಬ್ಬರು ವಿದ್ಯಾರ್ಥಿಗಳಿಗೆ ವರ್ಷಕ್ಕಾಗುವ ಇನ್ಸುಲಿನ್ ಚುಚ್ಚುಮದ್ದು ಒದಗಿಸಲು ತೀರ್ಮಾನಿಸಲಾಯಿತು. ಸರ್ಕಾರಿ ಪ್ರಾಥಮಿಕ ಶಾಲೆಯ ೪ನೇ ತರಗತಿ ವಿದ್ಯಾರ್ಥಿ ಹಾಗೂ ಅನುದಾನಿತ ಪ್ರೌಢಶಾಲಾ ೮ನೇ ತರಗತಿ ವಿದ್ಯಾರ್ಥಿನಿಗೆ ಅವರ ಪೋಷಕರಾದ ಹಿತ್ತಲಕೇರಿ ಗ್ರಾಮದ ರಾಜು ಹಾಗೂ ಹೆಮ್ಮನೆ ಗ್ರಾಮದ ಈರೇಶ್ ಅವರಿಗೆ ಡೈರಿಯನ್ನು ನೀಡಲಾಯಿತು. ವರ್ಷದವರೆಗೆ ಅಗತ್ಯವಿದ್ದಾಗ ಮೆಡಿಕಲ್ ಶಾಪ್‌ನಿಂದ ಚುಚ್ಚುಮದ್ದು ಪಡೆದು ಡೈರಿಯಲ್ಲಿ ನಮೂದಿಸಿ ಮಕ್ಕಳಿಗೆ ಕೊಡಿಸುವಂತೆ ಸೂಚಿಸಲಾಯಿತು.

ಈ ಆರೋಗ್ಯ ಸೇವಾ ಕಾರ್ಯಕ್ಕೆ ಸಹಾಯ ಹಸ್ತ ಚಾಚಿದ ದಾನಿಗಳು ಸಂಸ್ಥೆ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ವಲಯ ಸೇನಾನಿಗಳಾದ ಹೆಚ್.ವಿ. ದಿವಾಕರ್, ಟಿ.ಆರ್. ಪುರುಷೋತ್ತಮ್ ಹಾಗೂ ಅಶೋಕ್, ರೋಟರಿ ಸದಸ್ಯರಾದ ಚಂದ್ರಕಾAತ್, ಸೋಮಶೇಖರ್, ಸದಸ್ಯೆ ಬೀನಾ, ಮೋಹನ ಕುಮಾರಿ, ಕೀರ್ತಿ ಇತರರು ಹಾಜರಿದ್ದರು.