ವೀರಾಜಪೇಟೆ, ಸೆ. ೨೯: ವೀರಾಜಪೇಟೆ ವ್ಯಾಪ್ತಿಯಲ್ಲಿ ಹಲವಾರು ಡೆಂಗ್ಯೂ ಹಾಗೂ ಟೈಫಾಡ್ ಪ್ರಕರಣಗಳು ದೃಢಪಡುತ್ತಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಶುಚಿತ್ವದಿಂದ ಈ ರೀತಿ ರೋಗ ಹರಡುತ್ತಿದೆ ಎಂಬ ಗಂಭೀರ ಆರೋಪಗಳು ಜನರಿಂದ ಕೇಳಿಬರುತ್ತಿವೆ.
ಈಗಾಗಲೇ ಸುಂಕದ ಕಟ್ಟೆಯ ಮೂರು ನಿವಾಸಿಗಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಪತ್ತೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರದ ಸಾರ್ವಜನಿಕ ಶೌಚಾಲಯಗಳಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದ್ದು, ಚರಂಡಿಗಳು ಕೊಳಚೆ ತುಂಬಿ ದುರ್ನಾತ ಬೀರುತ್ತಿದೆ. ಪುರಸಭೆ ವತಿಯಿಂದ ಸ್ವಚ್ಛತೆ ಕಾಯ್ದುಕೊಳ್ಳದ ಬಗ್ಗೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಗಳು ನಡೆದಿದ್ದವು. ಇದೀಗ ಒಮ್ಮೆಗೆ ಎರಡು ಮೂರು ದಿನದ ಅಂತರದಲ್ಲಿ ೨೦೦ ಅಧಿಕ ಟೈಫಾಯ್ಡ್ ರೋಗಿಗಳು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಷಯ ಆತಂಕ ಉಂಟು ಮಾಡಿದೆ.
ಈ ವಿಚಾರವನ್ನು ತಿಳಿದ ವೀರಾಜಪೇಟೆ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಕಾಂತ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಲ್ಲದೇ ವೀರಾಜಪೇಟೆಯ ಪುರಸಭೆಗೂ ಭೇಟಿ ನೀಡಿ ನಗರದಲ್ಲಿ ಸ್ವಚ್ಛತೆಯ ಬಗ್ಗೆ ವಿಚಾರಿಸಿದರು. ಬಳಿಕ ‘ಶಕ್ತಿ’ಗೆ ಮಾಹಿತಿ ನೀಡಿದ ಶಶಿಕಾಂತ್ ವೀರಾಜಪೇಟೆಯಲ್ಲಿ ಮೂರು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆದರೆ ರೋಗಿಗಳು ಖಾಸಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರಿಂದ ಡೆಂಗ್ಯೂ ಜ್ವರ ಬಂದಿರುವ ಬಗ್ಗೆ ನಮ್ಮ ಇಲಾಖೆಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಸಾಕಷ್ಟು ಜನರಿಗೆ ಟೈಫಾಯ್ಡ್ ಜ್ವರ ಬಂದಿರುವ ಬಗ್ಗೆ ಮಾಹಿತಿ ಬಂದಿದೆ. ಈ ನಿಟ್ಟಿನಲ್ಲಿ ವೀರಾಜಪೇಟೆಯ ಪುರಸಭೆಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು, ವಾಟರ್ ಮೆನ್ಗಳು, ಅಭಿಯಂತರರ ಜೊತೆಗೆ ಶುದ್ಧ ಕುಡಿಯುವ ನೀರು ನೀಡುವ ಬಗ್ಗೆ ಚರ್ಚೆ ಮಾಡಿದ್ದೇನೆ. ಅಲ್ಲದೇ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆಗೂ ತಿಳುವಳಿಕೆ ನೀಡಿದ್ದೇವೆ. ಶೀಘ್ರದಲ್ಲಿಯೇ ಟೈಫಾಯಿಡ್ ಜ್ವರ ಹೆಚ್ಚಾಗಿರುವ ವಾರ್ಡ್ಗಳ ಸರ್ವೆಯನ್ನು ಆರೋಗ್ಯ ಕಾರ್ಯಕರ್ತರು ನಡೆಸಲಿದ್ದಾರೆ. ಬಳಿಕ ಅಲ್ಲಿ ಲಾರ್ವಾ ಸಮೀಕ್ಷೆ ಕೂಡಾ ನಡೆಸಲಾಗುತ್ತದೆ ಎಂದರು. ನಗರದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯ ಸುಸ್ಥಿತಿಯಲ್ಲಿ ಇಲ್ಲ. ಜನರು ಡೆಂಗ್ಯೂ ಜ್ವರ ಬಂದು ಚಿಕಿತ್ಸೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮೈಸೂರು, ಬೆಂಗಳೂರಿಗೆ ತೆರಳುತ್ತಿದ್ದಾರೆ. ಈಗಲಾದರೂ ಪುರಸಭೆ ನಗರವನ್ನು ಶುಚಿಯಾಗಿಡುವ ಕಡೆ, ಜನರಿಗೆ ಒಳ್ಳೆಯ ಕುಡಿಯುವ ನೀರು ಕೊಡುವ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಪುರಸಭೆ ಸದಸ್ಯ ಎಸ್.ಹೆಚ್. ಮತೀನ್ ಒತ್ತಾಯಿಸಿದ್ದಾರೆ.