ಹೊದ್ದೂರು, ಸೆ. ೩೦: ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಮೂರ್ನಾಡು ಕೊಡವ ಸಮಾಜದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.೪೬,೩೩ ಕೋಟಿ ವ್ಯವಹಾರ ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. ೧೭,೯೩,೯೨೭.೯೭ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದ ಸದಸ್ಯರಿಗೆ ಶೇ. ೧೩ ಡಿವಿಡೆಂಟ್ ಹಂಚಿಕೆ ಮಾಡಲಾಯಿತು. ಸಂಘದಲ್ಲಿ ಒಟ್ಟು ೨೦೬೭ ಸದಸ್ಯರಿದ್ದು, ಒಟ್ಟು ರೂ. ೬೬,೯೭,೧೫೦ ಪಾಲು ಬಂಡವಾಳ ಸಂಗ್ರಹವಾಗಿದೆ. ಸಂಘವು ಆಡಿಟ್ ವರದಿಯ ಪ್ರಕಾರ ‘ಎ’ ತರಗತಿಯಲ್ಲಿ ವರ್ಗೀಕರಿಸಲಾಗಿದೆ. ಸಂಘದಲ್ಲಿ ವಿವಿಧ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು ರೂ. ೫,೦೭,೯೬,೩೮೯.೧೨ ಕೋಟಿ ಠೇವಣಿಯನ್ನು ಸಂಗ್ರಹಿಸಲಾಗಿದೆ. ಸಂಘವು ಗೋದಾಮು ನಿರ್ಮಾಣಕ್ಕಾಗಿ ನಬಾರ್ಡ್ನಿಂದ ಮಂಜೂರಾದ ರೂ. ೨೫ ಲಕ್ಷ ಸಾಲದ ಪೈಕಿ ರೂ. ೨೩ ಲಕ್ಷವನ್ನು ಡಿಸಿಸಿ ಬ್ಯಾಂಕಿನಿAದ ಪಡೆದುಕೊಂಡಿದ್ದು, ಕಟ್ಟಡ ಕಾಮಗಾರಿಯು ಅಂತಿಮ ಹಂತದಲ್ಲಿರುತ್ತದೆ ಎಂದು ತಿಳಿಸಿದರು. ೨೦೨೧-೨೨ನೇ ಸಾಲಿನಲ್ಲಿ ಸಂಘದ ಮೂಲಕ ಕೆಸಿಸಿ ಸಾಲ, ಆಭರಣ ಈಡಿನ ಸಾಲ, ಜಾಮೀನು ಸಾಲ, ಸ್ವಸಹಾಯ ಗುಂಪಿನ ಸಾಲ, ಜಂಟಿ ಭಾದ್ಯತಾ ಗುಂಪಿನ ಸಾಲ, ನಿರಖು ಠೇವಣಿ ಸಾಲ, ಮಧ್ಯಮಾವಧಿ ಸಾಲ, ವೇತನಾಧಾರಿತ ಸಾಲ, ಗೊಬ್ಬರ ಸಾಲ ಸೇರಿ ಒಟ್ಟು ರೂ. ೮,೦೧,೫೮,೨೯೮ ಸಾಲ ನೀಡಲಾಗಿದೆ ಎಂದರು. ಸಭೆಯಲ್ಲಿ ಕಳೆದ ವಾರ್ಷಿಕ ಮಹಾಸಭೆಯ ವರದಿ ಓದಿ ದಾಖಲು ಮಾಡಲಾಯಿತು. ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಾಂಚೀರ ರನ್ನ ಅಜಯ್ ಕುಮಾರ್, ನಿರ್ದೇಶಕರುಗಳಾದ ನೆರವಂಡ ಅನುಪ್ ಉತ್ತಯ್ಯ, ಚೌರೀರ ಪ್ರಕಾಶ್ ಪಳಂಗಪ್ಪ, ಐರೀರ ಜಾಬು ಪೂಣಚ್ಚ, ಮೇಕಂಡ ಪಾಪು ಸುಬ್ರಮಣಿ, ಕರ್ಣಯ್ಯನ ಜೆ. ರಾಧಾಕೃಷ್ಣ, ಕರ್ಣಯ್ಯನ ಬಿ. ಪ್ರಭಾಕರ, ಚೆಟ್ಟಿಮಾಡ ಯು. ಹೇಮಮಾಲಿನಿ, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ಮೈತ್ರಿ ಸುರೇಶ್ ಉಪಸ್ಥಿತರಿದ್ದರು. ಸಂಘದ ಸದಸ್ಯೆ ಮೇಕಂಡ ಪಾರ್ವತಿ ಪ್ರಾರ್ಥಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ. ಸೋಮಣ್ಣ ನಿರೂಪಿಸಿ, ವಂದಿಸಿದರು.