ಮಡಿಕೇರಿ, ಸೆ. ೨೮ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ದಸರಾ ಕ್ರೀಡಾ ಸಮಿತಿ ವತಿಯಿಂದ ದಸರಾ ಕ್ರೀಡಾಕೂಟಕ್ಕೆ ಇಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.

ಸಿಆರ್‌ಪಿಎಫ್ ನಿವೃತ್ತ ಡೆಪ್ಯುಟಿ ಕಮಾಂಡೆAಟ್ ಎ.ಡಿ. ಗಣಪತಿ ಕ್ರೀಡಾಜ್ಯೋತಿ ಬೆಳಗಿದರು. ಕ್ರೀಡಾಕೂಟಕ್ಕೆ ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್ ಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕ್ರೀಡಾಕೂಟ ಗಳಿಂದ ಒಗ್ಗಟ್ಟಿನ ಮನೋಭಾವ ಮೂಡುತ್ತದೆ ಎಂದು ಅಭಿಪ್ರಾಯ ಪಟ್ಟರು. ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಕ್ರೀಡಾಸ್ಪೂರ್ತಿಯನ್ನು ಪ್ರದರ್ಶಿಸಬೇಕೆಂದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ ಆರೋಗ್ಯದ ರಕ್ಷಣೆಗೆ ಕ್ರೀಡೆ ಸಹಕಾರಿ ಎಂದು ಹೇಳಿದರು. ವೇದಿಕೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ರಾಜೀವ್ (ಮನು), ರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಚಿನ್ ವಾಸುದೇವ್, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ದಸರಾ ಕ್ರೀಡಾ ಸಮಿತಿ ಕಾರ್ಯದರ್ಶಿ ಕಪಿಲ್ ಮತ್ತಿತರರು ಉಪಸ್ಥಿತಿತರಿದ್ದರು. ಬಳಿಕ ವಿವಿಧ ಕ್ರೀಡಾಕೂಟಗಳು ನಡೆದವು.