ಸಿದ್ದಾಪುರ, ಸೆ. ೨೮: ರಾಜಕೀಯದ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅವರ ಸಹೋದರರು ಸೇರಿ ಈರ್ವರು ಯುವಕರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಪ್ರಕರಣ ಸಂಬAಧ ಮೂವರ ವಿರುದ್ಧ ಕೊಲೆಯತ್ನ ಮೊಕದ್ದಮೆ ದಾಖಲಾಗಿದೆ.

ಅರೆಕಾಡು ಗ್ರಾಮದ ನಿವಾಸಿ ಹಾಗೂ ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವೈ ಪ್ರಭುಶೇಖರ್ ಹಾಗೂ ಇವರ ಸಹೋದರರಾದ ಬಿ.ವೈ. ಅಪ್ರುರವೀಂದ್ರ, ಬಿ.ವೈ. ರಘು ಆನಂದ ಅವರು ಸೇರಿ ಅರೆಕಾಡು ಗ್ರಾಮದ ನಿವಾಸಿ ದೋಲ್ಪಾಡಿ ಯಶ್ವಂತ್ ಹಾಗೂ ಬಲ್ಲಚಂಡ ಚಂದನ್ ಇವರಿಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ದೋಲ್ಪಾಡಿ ಯಶ್ವಂತ್ ಸಿದ್ದಾಪುರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಇದರಲ್ಲಿ ತಾನು ಕಾಂಗ್ರೆಸ್ ಪಕ್ಷದ ಮಡಿಕೇರಿ ಬ್ಲಾಕ್‌ನ ಕಾರ್ಯದರ್ಶಿಯಾಗಿದ್ದು, ತಾನು ತಾ. ೨೮ ರಂದು ಅರೆಕಾಡು ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಮಹಿಳೆಯೊಬ್ಬರ ನಿಧನ ಹೊಂದಿರುವ ಸ್ಥಳಕ್ಕೆ ತನ್ನ ಸ್ನೇಹಿತ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಬಲ್ಲಚಂಡ ಚಂದನ್‌ನೊAದಿಗೆ ತೆರಳಿ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ಅರೆಕಾಡು ಜಂಕ್ಷನ್ ಬಳಿ ಹೊಟೇಲ್‌ನಲ್ಲಿ ಬೆಳಿಗ್ಗೆ ಅಂದಾಜು ೯ ಗಂಟೆಗೆ ಸಮಯಕ್ಕೆ ಟೀ ಸೇವಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪ್ರಭುಶೇಖರ್ ಹಾಗೂ ಅವರ ಸಹೋದರ ಅಪ್ರುರವೀಂದ್ರ, ರಘು ಆನಂದ ಸೇರಿ ತನ್ನ ತಲೆಯ ಭಾಗಕ್ಕೆ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ನಾನು ತಡೆಯಲು ಯತ್ನಿಸಿದ್ದಾಗ ನನ್ನ ಕೈಗಳಿಗೆ ಹಾಗೂ ತೊಡೆಗೆ ಗಂಭೀರ ಗಾಯಗಳಾಗಿವೆ. ಅಲ್ಲದೇ ನನ್ನ ಸ್ನೇಹಿತ ಚಂದನ್‌ಗೆ ಕಾಲಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಯಶ್ವಂತ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಭುಶೇಖರ್, ಅಪ್ರುರವೀಂದ್ರ, ರಘುಆನಂದ ಅವರ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿದ್ದರು.

ಗಾಯಾಳು ಯಶ್ವಂತ್ ಹಾಗೂ ಚಂದನ್ ಅವರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.