ಪೊನ್ನಂಪೇಟೆ, ಸೆ. ೨೮: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋಣಿಕೊಪ್ಪಲು ಸಮೀಪದ ಅರ್ವತೊಕ್ಕಲು ಗ್ರಾಮದ ಪಿಹೆಚ್‌ಎಸ್ ಕಾಲೋನಿಯ ನಿವಾಸಿ ಎಂ.ಪಿ. ನೌಪಾಸ್ (೧೯) ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿ ಜೋಡುಬೀಟಿ ನೆಹರು ನಗರದ ವರ್ಷಿತ್ ತಲೆಮರೆಸಿಕೊಂಡಿದ್ದಾನೆ.

ಹುಣಸೂರು ಕಡೆಯಿಂದ ಗಾಂಜಾ ತೆಗೆದುಕೊಂಡು ಹಳದಿ ಬಣ್ಣದ ಹೋಂಡಾ ಡಿಯೊ ಸ್ಕೂಟರ್ (ಕೆ.ಎ.೧೨-ವಿ.೩೬೨೮) ನಲ್ಲಿ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಗೋಣಿಕೊಪ್ಪ - ಪೊನ್ನಂಪೇಟೆ ಮುಖ್ಯರಸ್ತೆಯಲ್ಲಿರುವ ಜೋಡುಬೀಟಿ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ಆರೋಪಿ ನೌಪಾಸ್‌ನನ್ನು ಸೆರೆಹಿಡಿದ್ದಾರೆ. ಈ ಸಂದರ್ಭ ಮತ್ತೊಬ್ಬ ಆರೋಪಿ ಹಿಂಬದಿಯ ಸವಾರ ವರ್ಷಿತ ಸ್ಕೂಟರ್‌ನಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ. ಕವರಿನಲ್ಲಿದ್ದ ೫೫೦ ಗ್ರಾಂ ಹಾಗೂ ಮಾರಾಟಕ್ಕೆ ಸಿದ್ಧಪಡಿಸಿದ್ದ ೩೦ ಚಿಕ್ಕ ಗಾಂಜಾ ಪೊಟ್ಟಣ ಸೇರಿದಂತೆ ಒಟ್ಟು ೬೫೦ ಗ್ರಾಂನಷ್ಟು ಗಾಂಜಾ ಹಾಗೂ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ವರ್ಷಿತ್ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ. ಎಸ್.ಪಿ. ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರ ನಿರ್ದೇಶನದ ಮೇರೆಗೆ, ಡಿವೈಎಸ್‌ಪಿ ನಿರಂಜನ ರಾಜೇ ಅರಸ್, ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಸಬ್ ಇನ್ಸ್ಪೆಕ್ಟರ್ ಡಿ. ಕುಮಾರ್, ಅಪರಾಧ ವಿಭಾಗದ ಸಬ್‌ಇನ್ಸ್ಪೆಕ್ಟರ್ ಹೆಚ್.ಸಿ. ಸುಬ್ರಮಣಿ, ಸಿಬ್ಬಂದಿ ಎಸ್.ಬಿ. ಮಹದೇಶ್ವರ ಸ್ವಾಮಿ, ಪ್ರಮೋದ್ ಕುಮಾರ್, ಜೀವನ್ ಮತ್ತು ಸಂತೋಷ್ ಭಾಗವಹಿಸಿದ್ದರು.