ಮಡಿಕೇರಿ, ಸೆ. ೨೭: ಮೈಸೂರಿನ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಕೈಲ್‌ಮುಹೂರ್ತ ಸಮಾರಂಭವನ್ನು ನಡೆಸಲಾಯಿತು.

ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ ಅವರು ಆಯುಧ ಪೂಜೆ ಮಾಡುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ಮಾಜಿ ಶಾಸಕ ವಾಸು, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಉಪಸ್ಥಿತರಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ ಅವರು ವಹಿಸಿದ್ದರು.

ಸಮಾರಂಭದಲ್ಲಿ ಸಮುದಾಯದ ಸಾಧಕರಾದ ಚಂಡಿರ ಬಸಪ್ಪ, ಕೇಚಪ್ಪನ ಅಯ್ಯಪ್ಪ ಮತ್ತು ಮುಕ್ಕಾಟಿ ದಿವ್ಯ ಅರುಣ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದ ೮೨ ಕೊರೊನಾ ವಾರಿರ‍್ಸ್ಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

೨೦೨೧-೨೨ರ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾರಂಭದಲ್ಲಿ ಸಮುದಾಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ೭೫೦ ಕ್ಕಿಂತ ಹೆಚ್ಚು ಸದಸ್ಯರು ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.