ಸೋಮವಾರಪೇಟೆ, ಸೆ. ೨೮: ಗೌಡಳ್ಳಿ ಗ್ರಾಮ ಪಂಚಾಯಿತಿಗೆ ನರೇಗಾ ಯೋಜನೆಯಲ್ಲಿ ಬಿಡುಗಡೆ ಯಾಗಬೇಕಿದ್ದ ಹಣ ಸ್ಥಗಿತಗೊಂಡಿ ರುವ ಹಿನ್ನೆಲೆ ಅಸಮಾಧಾನಗೊಂಡ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆದಿದೆ.
ಪಂಚಾಯಿತಿ ಅಧ್ಯಕ್ಷೆ ಜಿ.ಜಿ. ಮಲ್ಲಿಕ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾದAತೆ ಸದಸ್ಯ ನವೀನ್ ಅಜ್ಜಳ್ಳಿ ಮಾತನಾಡಿ, ೨೦೨೨-೨೩ ರ ಸಾಲಿನಲ್ಲಿ ನರೇಗಾದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಸಾಮಗ್ರಿ ಬಿಲ್ ಜಾಸ್ತಿಯಾಗಿದೆ ಎಂದು ಬಿಡುಗಡೆ ಯಾಗಬೇಕಾದ ಕೂಲಿ ಮೊತ್ತವನ್ನು ತಡೆಹಿಡಿಯಲಾಗಿದೆ. ಇದರಿಂದ ಸಮಸ್ಯೆಯಾಗಿದೆ ಎಂದು ಹೇಳಿದರು.
ಗ್ರಾ.ಪಂ.ಯಲ್ಲಿ ನರೇಗಾ ಯೋಜನೆಯಲ್ಲಿ ಹೆಚ್ಚಿನ ಕಾಮಗಾರಿಗಳು ನಡೆಯುತ್ತಿದ್ದವು. ಈಗ ಉದ್ಯೋಗಖಾತ್ರಿ ಯೋಜನೆ ‘ಲಾಕ್’ ಆಗಿರುವುದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ರೈತರು ಆಕ್ರೋಶಗೊಂಡಿದ್ದಾರೆ. ನಾವು ರಸ್ತೆಯಲ್ಲಿ ನಡೆದಾಡಲು ಸಮಸ್ಯೆಯಾಗಿದೆ; ನಿಂದನೆಗೆ ಒಳಗಾಗಬೇಕಿದೆ ಎಂದು ಸದಸ್ಯರಾದ ಕೆ.ಎಂ. ರೋಹಿಣಿ, ಸಿ.ಈ. ವೆಂಕಟೇಶ್, ಜಿ.ಎಸ್. ಪ್ರಸನ್ನ, ಬಿ.ಹೆಚ್. ಮಂಜುನಾಥ್, ಕೆ.ಕೆ. ಸುಮಾ, ಜಿ.ಜಿ. ಗಣೇಶ್, ಕೆ.ಡಿ. ವಿಶಾಲಾಕ್ಷಿ, ಕೆ.ಡಿ. ಗೌರಿ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಕಾರ್ಯದರ್ಶಿ, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ತ್ಯಾಜ್ಯ ಸಂಗ್ರಹ ವಾಹನದ ಚಾಲಕ ಇಲ್ಲ. ಪಂಚಾಯಿತಿ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭ ನರೇಗಾ ಹಣವನ್ನು ತಡೆ ಹಿಡಿದರೆ ಏನು ಮಾಡುವುದು? ಎಂದು ಅಧ್ಯಕ್ಷರು ಪ್ರಶ್ನಿಸಿದರು.
ಇಂದಿನ ಸಾಮಾನ್ಯ ಸಭೆಯನ್ನು ಬಹಿಷ್ಕರಿಸುತ್ತಿದ್ದು, ತಕ್ಷಣ ನರೇಗಾ ಯೋಜನೆ ಮೂಲಕ ಪಂಚಾಯಿತಿಗೆ ಬರಬೇಕಿರುವ ಅನುದಾನವನ್ನು ಬಿಡುಗಡೆಗೊಳಿಸಲು ಇಲಾಖಾಧಿಕಾರಿಗಳು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.