ಮಡಿಕೇರಿ,ಸೆ.೨೭ : ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಂದೊAದು ವಾರಕ್ಕೊಮ್ಮೆ ಕಾಫಿ, ವೈನ್, ಜೇನು ಉತ್ಸವ ಆಚರಿಸಲು ತೀರ್ಮಾನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಅವಲಂಬಿತರೊAದಿಗಿನ ಸಂವಾದದಲ್ಲಿ ಸಮಸ್ಯೆ, ಸಲಹೆಗಳನ್ನು ಆಲಿಸಿ ಅವರು ಮಾತನಾಡಿದರು. ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಜಲಕ್ರೀಡೆ (ಅಕ್ವಾ ಸ್ಪೋರ್ಟ್ಸ್) ಹಾಗೂ ಕೂಡಿಗೆಯಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಲಾಗುವದೆಂದು ಇದೇ ಸಂದರ್ಭ ತಿಳಿಸಿದರು.
ಊಟ ಸಿಗುವದಿಲ್ಲ
ಸಂವಾದದಲ್ಲಿ ಪಾಲ್ಗೊಂಡಿದ್ದ ನಾಣಿ ಎಂಬವರು ಮಾತನಾಡಿ, ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ರಾತ್ರಿ ೧೦ಗಂಟೆ ಬಳಿಕ ಹೊಟೇಲ್ಗಳು ಇರುವದಿಲ್ಲ, ರಾತ್ರಿ ಬರುವ ಪ್ರವಾಸಿಗರಿಗೆ ಊಟ ಸಿಗುವದಿಲ್ಲ. ಬಸ್, ವಾಹನಗಳಲ್ಲಿ ಊಟ ಮಾಡಿದರೆ ಪೊಲೀಸರು ಬಿಡುವದಿಲ್ಲ. ೨೪ ಗಂಟೆಗಳ ಕಾಲ ಹೊಟೇಲ್ ತೆರದಿರಬೇಕು, ಪೊಲೀಸ್ ಭದ್ರತೆ ನೀಡಲಾಗುವದೆಂದು ಸರಕಾರ ಹೇಳಿದ್ದರೂ ಇಲ್ಲಿ ಜಾರಿಯಾಗಿಲ್ಲ. ಅಲ್ಲದೆ, ಚೆಕ್ಪೋಸ್ಟ್ ಇಲ್ಲದ ಕಾರಣ ಕೇರಳದಿಂದ ಬರುವ ವಾಹನಗಳಿಗೆ ಸಾರಿಗೆ ಇಲಾಖೆಯವರು ಬೇಕಾ ಬಿಟ್ಟಿ ದಂಡ, ತೆರಿಗೆ ವಿಧಿಸುತ್ತಾರೆ. ಗೈಡ್ಗಳೂ ಇಲ್ಲದೆ ಪ್ರವಾಸಿಗರಿಗೆ ಅನಾನುಕೂಲ ಆಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಎರಡೇ ಉದ್ಯಮ
ಸಿಪಿಎ ಅಧ್ಯಕ್ಷ ಮೋಹನ್ದಾಸ್ ಮಾತನಾಡಿ, ಜಿಲ್ಲೆಯಲ್ಲಿ ಕಾಫಿ ಹಾಗೂ ಪ್ರವಾಸೋದ್ಯಮ ಎರಡೇ ಉದ್ಯಮಗಳಿರುವದು. ಕಾಫಿ ಉದ್ಯಮ ಕುಸಿತ ಕಂಡ ಬಳಿಕ ಹೋಂಸ್ಟೇ ಉದ್ಯಮ ಬಂದಿದ್ದು, ಅದಕ್ಕೂ ತೆರಿಗೆ, ಜಿಎಸ್ಟಿ, ಇತರ ಖರ್ಚುಗಳನ್ನು ಕಳೆದರೆ ಮಾಲೀಕನಿಗೆ ಏನೂ ದಕ್ಕುವದಿಲ್ಲ. ದಲ್ಲಾಳಿಗಳ ಹಾವಳಿಯಿಂದಾಗಿ ಪ್ರವಾಸಿಗರೂ ಬರುವದಿಲ್ಲ. ಜಿಲ್ಲಾಡಳಿತ ಖಾಸಗಿ ಹಾಗೂ ಸಾರ್ವಜನಿಕರ ಸಂಪರ್ಕ ಸಾಧಿಸಿ ಚರ್ಚೆ ಮಾಡಿ ಸಮಸ್ಯೆ ಪರಿಹರಿಸಬೇಕೆಂದು ಹೇಳಿದರು.
ಅನಧಿಕೃತ ಸ್ಟೇ ಮೇಲೆ ಕ್ರಮ
ಮೋಂತಿ ಗಣೇಶ್ ಮಾತನಾಡಿ; ೨೦೦೩ರಲ್ಲಿ ಹೋಂಸ್ಟೇ ಪರಿಕಲ್ಪನೆ ಆರಂಭಗೊAಡಿದ್ದು, ೨೦೧೭ರವರೆಗೂ ಚೆನ್ನಾಗಿಯೇ ಇದ್ದಿತು. ನಂತರದಲ್ಲಿ ಓಯೋ ಸಂಸ್ಥೆ ಬಂದ ಬಳಿಕ ವ್ಯವಸ್ಥೆ ಹಾಳಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಅನಧಿಕೃತ ಸ್ಟೇಗಳಿದ್ದು, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಅನಧಿಕೃತ ಸ್ಟೇಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನೋಂದಾಯಿತ ಹೋಂಸ್ಟೇಗಳಿAದ ಪ್ರವಾಸೋದ್ಯಮ ಅಭಿವೃದ್ಧಿಯಾಗಿದ್ದು, ಹೊಟೇಲ್, ಸರಕಾರದಿಂದ ಅಲ್ಲವೆಂದು ಪ್ರತಿಪಾದಿಸಿದ ಅವರು; ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ ಬೇಕಿದೆ ಎಂದು ಹೇಳಿದರು.
ಮೂಲಭೂತ ಸೌಲಭ್ಯದ ಕೊರತೆ
ಟೂರಿಸಂ ಅಸೋಸಿಯೇಶನ್ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಮಾತನಾಡಿ; ಜಿಲ್ಲೆಯಲ್ಲಿ ಸುಂದರ ಪ್ರದೇಶಗಳಲ್ಲಿ ಹೋಂಸ್ಟೇಗಳಿವೆ. ಕೃಷಿಯೊಂದಿಗೆ ಪ್ರವಾಸೋದ್ಯಮವನ್ನು ಬೆಳೆಸುತ್ತಾ ಬರುತ್ತಿದ್ದಾರೆ.
(ಮೊದಲ ಪುಟದಿಂದ) ಆದರೆ ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇದೆ. ರಸ್ತೆಗಳು ಸರಿ ಇಲ್ಲ, ಇದರಿಂದ ವಾಹನ ದಟ್ಟಣೆಯೊಂದಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಘರ್ಷಣೆಗಳಾಗುತ್ತಿವೆ. ಶೌಚಾಲಯ, ನೀರಿನ ಸೌಲಭ್ಯಗಳಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಆಸಕ್ತಿ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಉದ್ಯಮ ಆರಂಭಿಸಲು ನಿರುದ್ಯೋಗಿ ಯುವಕರು ಮುಂದಾದ ಸಂದರ್ಭ ಕಂದಾಯ ಇಲಾಖೆಯಲ್ಲಿ ದಾಖಲೆಗಳು ದೊರಕಲು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಕರೂಪದ ಕಿಟಕಿ ವ್ಯವಸ್ಥೆಯಡಿ ದಾಖಲೆಗಳನ್ನು ಒದಗಿಸಿಕೊಡುವಂತಾಗಬೇಕೆAದು ಒತ್ತಾಯಿಸಿದರು.
ಸಾಹಸಿ ಪ್ರವಾಸೋದ್ಯಮ ಬೇಕು
ಎಂಬಿಎ ಅಸೋಸಿಯೇಶನ್ನ ಯೋಗಾನಂದ ಮಾತನಾಡಿ; ಪ್ರಸ್ತುತ ಸಾಹಸಿ ಪ್ರವಾಸೋದ್ಯಮಕ್ಕೂ ಬೇಡಿಕೆ ಇದೆ, ಆದರೆ ಚಾರಣ ಹೋಗುವ ಸಂದರ್ಭ ಕೆಲವೆಡೆ ಗ್ರಾಮಸ್ಥರು ವಿರೋಧ ಮಾಡುತ್ತಾರೆ, ಹಾಗಾಗಿ ಚೆಕ್ ಪೋಸ್ಟ್, ಅನುಮತಿ ಪತ್ರ ನೀಡುವಂತಾಗಬೇಕು. ಟೆಂಟ್, ಕ್ಯಾರವಾನ್ಗಳಿಗೂ ಬೇಡಿಕೆ ಇದ್ದು, ಇದಕ್ಕೆ ಪೂರಕವಾದ ಸ್ಥಳಾವಕಾಶ ಒದಗಿಸಬೇಕಿದೆ ಎಂದು ಹೇಳಿದರು.
ಪ್ರವಾಸಿಗರನ್ನು ಸೆಳೆಯಬೇಕು
ಸತೀಶ್ ಮಾತನಾಡಿ, ನಾವುಗಳು ರಜಾ ದಿನಗಳನ್ನು ಅವಲಂಬಿತವಾಗದೆ ಎಲ್ಲ ದಿನಗಳಲ್ಲೂ ಪ್ರವಾಸಿಗರನ್ನು ಸೆಳೆಯುವಂತಾಗಬೇಕು. ಯಾವ ಸಂದರ್ಭದಲ್ಲಿ ಇಲ್ಲಿಯ ವಿಶೇಷತೆ ಏನೆಂಬುದನ್ನು ಪ್ರಚುರಪಡಿಸಬೇಕು. ಪ್ರವಾಸಿಗರು ಹೆಚ್ಚಾದಷ್ಟು ಉದ್ಯಮ ಬೆಳವಣಿಗೆಯಾಗುವದರೊಂದಿಗೆ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ಸಲಹೆ ಮಾಡಿದರು. ಅಲ್ಲದೆ, ಜಿಲ್ಲೆಯಲ್ಲಿ ಉತ್ಪನ್ನವಾಗದೇ ಇರುವ ಕೆಲವೊಂದು ಸಂಬಾರ ಪದಾರ್ಥಗಳು, ಜೇನು, ಏಲಕ್ಕಿ ಮುಂತಾದುವುಗಳನ್ನು ಕೊಡಗಿನ ಉತ್ಪನ್ನಗಳೆಂದು ಮಾರಾಟ ಮಾಡಿ ಪ್ರವಾಸಿಗರಿಗೆ ಮೋಸ ಮಾಡುತ್ತಿರುವದು ಸರಿಯಲ್ಲ, ಈ ಬಗ್ಗೆ ಕ್ರಮ ಆಗಬೇಕೆಂದು ಆಗ್ರಹಿಸಿದರು.
ಕೊಡಗು ಉತ್ಸವ ಮಾಡಿ
ಗ್ರೀನ್ ಸಿಟಿ ಫೋರಂನ ಚೆಯ್ಯಂಡ ಸತ್ಯ ಮಾತನಾಡಿ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕಳೆದ ಮೂರು ವರ್ಷಗಳ ಹಿಂದೆ ಕೊಡಗು ಉತ್ಸವ ಆಚರಿಸಲಾಗಿತ್ತು. ಅದನ್ನು ಮುಂದುವರಿಸುವAತೆ ಸಲಹೆ ಮಾಡಿದರು.
ಪಿಡಿಓಗಳನ್ನು ಕರೆಸಬೇಕು
ಚೇಂಬರ್ ಆಫ್ ಕಾಮರ್ಸ್ ಸಂಘಟನಾ ಕಾರ್ಯದರ್ಶಿ ಅಂಬೆಕಲ್ ನವೀನ್ ಮಾತನಾಡಿ; ದಸರಾ ಉತ್ಸವ ಆಚರಣೆ ಬಳಿಕ ಎಲ್ಲ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಸೇರಿಸಿ ಸಭೆ ಏರ್ಪಾಡು ಮಾಡಬೇಕೆಂದು ಸಲಹೆ ಮಾಡಿದರು.
ಉತ್ಸವಗಳು
ಎಲ್ಲರ ಸಮಸ್ಯೆ ಹಾಗೂ ಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು; ಕೊಡಗು ಉತ್ಸವ ಆಚರಣೆ ಬಗ್ಗೆ ಗಮನ ಹರಿಸಲಾಗುವದು. ಇದರೊಂದಿಗೆ ಒಂದು ವಾರಗಳ ಕಾಲ ಕಾಫಿ ಉತ್ಸವ, ವೈನ್ ಹಾಗೂ ಜೇನು ಉತ್ಸವ ಆಚರಿಸಲು ತೀರ್ಮಾನಿಸಿರುವದಾಗಿ ಹೇಳಿದರು. ಇದರೊಂದಿಗೆ ಹಾರಂಗಿಯಲ್ಲಿ ಹೆಲಿಪೋರ್ಟ್ ನಿರ್ಮಾಣವಾಗಲಿದ್ದು, ಒಂದು ವರ್ಷದೊಳಗಡೆ ಕಾಮಗಾರಿ ಆರಂಭವಾಗಲಿದೆ. ಇದಾದ ಬಳಿಕ ಪ್ರವಾಸಿಗರು ಹೆಚ್ಚಾಗಲಿದ್ದು, ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಹಾರಂಗಿ ಜಲಾಶಯದ ಬಳಿ ಟ್ರೀ ಪಾರ್ಕ್ ನಿರ್ಮಾಣವಾಗಲಿದ್ದು, ಈಗಾಗಲೇ ಕಾಮಗಾರಿ ನಡೆಯುತ್ತಿದೆ, ಇದೂ ಕೂಡ ಒಂದು ಪ್ರವಾಸಿ ತಾಣವಾಗಲಿದೆ. ಅಲ್ಲದೆ, ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಜಲಕ್ರೀಡೆ ಆರಂಭ ಮಾಡಲು ಈಗಾಗಲೇ ಟೆಂಡರ್ ಆಗಿದೆ. ಶೀಘ್ರದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಚೇಲಾವರ ಜಲಪಾತದ ಬಳಿ ಪ್ರವಾಸಿಗರ ವೀಕ್ಷಣೆಗೆ ತೂಗುಸೇತುವೆ ನಿರ್ಮಿಸಲು ೧.೫ಕೋಟಿ ಮೀಸಲಿರಿಸಿದ್ದು, ಇಂಜಿನಿಯರ್ಗಳು ಸಿಗುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಫಿ ಟೇಬಲ್
ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ, ವಿಶೇಷತೆಗಳ ಕುರಿತಾಗಿನ ಮಾಹಿತಿ ಇರುವ ‘ಕಾಫಿ ಟೇಬಲ್’ ಎಂಬ ವೀಡೀಯೋ ಚಿತ್ರ ತಯಾರಿಸಿದ್ದು, ಅದಕ್ಕೆ ಇನ್ನಷ್ಟು ಮಾಹಿತಿಗಳನ್ನು ಅಳವಡಿಸಲಾಗುವದು. ಪ್ರವಾಸಿ ಸಂಬAಧಿತ ವೆಬ್ಸೈಟ್ಗಳಿದ್ದಲ್ಲಿ ಅದನ್ನು ನೀಡಿದ್ದಲ್ಲಿ ಜಿಲ್ಲಾಡಳಿತದ ವೆಬ್ಸೈಟ್ನ ಲಿಂಕ್ ನೀಡಲಾಗುವದು. ಆ ಮೂಲಕವೂ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರಾಜಾಸೀಟಿನಲ್ಲಿ ಕಾರ್ಯಕ್ರಮ
ಈ ಹಿಂದೆ ಇದ್ದಂತೆ ರಾಜಾಸೀಟ್ ಉದ್ಯಾನದಲ್ಲಿ ಸಂಜೆ ವೇಳೆ ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿ ಕಾರ್ಯಕ್ರಮ ನೀಡಲು ಅವಕಾಶ ಕೋರಿ ಮನವಿ ಬಂದಿದೆ. ಇದಕ್ಕೆ ಅವಕಾಶ ನೀಡಲಾಗುವದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಇದೇ ಸಂದರ್ಭ ಮನವಿ ಮಾಡಿದರು.