ಮಡಿಕೇರಿ, ಸೆ. ೨೭: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಬಸ್ ನಿಲುಗಡೆ ಹಂತವನ್ನು ಹೆಚ್ಚುಗೊಳಿಸಿರುವ ಕ್ರಮಕ್ಕೆ ಬಸ್ ನಿರ್ವಾಹಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮೊದಲ ರೀತಿಯಲ್ಲಿ ಹಂತಗಳಲ್ಲಿ ಮುಂದುವರಿಸುವAತೆ ಒತ್ತಾಯಿಸಿದ್ದಾರೆ.

ಆಗಸ್ಟ್ ೧೩ ರಿಂದ ಅನ್ವಯವಾಗು ವಂತೆ ಮಡಿಕೇರಿ-ಕುಶಾಲನಗರ ಸಾಮಾನ್ಯ ಸಾರಿಗೆಗಳಲ್ಲಿ ಉಪಹಂತ ಗಳನ್ನು ಹೆಚ್ಚಿಸಿ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ೩೨ ಕಿ. ಮೀ. ಗೆ ೫ ಮುಖ್ಯ ಹಂತಮತ್ತು ೫ ಉಪ ಹಂತಗಳಿದ್ದು ಪ್ರಸ್ತುತ ೩೨ ಕಿ. ಮೀ.ಗೆ ಒಟ್ಟು ೩೨ ಹಂತ ಮತ್ತು ಉಪ ಹಂತಗಳನ್ನು ಮಾಡಲಾಗಿದೆ. ಇದರಿಂದ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಈ ರೀತಿಯ ಕ್ರಮ ಸಂಸ್ಥೆಯ ಇತರೆ ಯಾವುದೇ ವಿಭಾಗದಲ್ಲಿಯೂ ಘಟಕದಲ್ಲಿಯೂ, ಮಾರ್ಗದಲ್ಲಿಯೂ ಅಳವಡಿಸದೆ ಕೇವಲ ಮಡಿಕೇರಿ ಘಟಕದ ಮಡಿಕೇರಿ ಕುಶಾಲನಗರ ಮಾರ್ಗಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ಮಾಡಿರುವುದು ನಿರ್ವಾಹಕರ ಅತೃಪ್ತಿಗೆ ಕಾರಣವಾಗಿದೆ.

ಪ್ರಯಾಣಿಕರು ಬಸ್ಸನ್ನು ಹತ್ತಿ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಮೊದಲೇ ಅಳವಡಿಸಿರುವ ಉಪಹಂತಗಳು ಬಂದು ನಿರ್ವಾಹಕರುಗಳು ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಬಸ್ಸನ್ನು ನಿಲ್ಲಿಸಿ ಟಿಕೆಟ್ ವಿತರಣೆ ಮಾಡಿದರೆ ಪ್ರಯಾಣಿಕರು ನಮಗೆ ಕೆಲಸ ಕಾರ್ಯಗಳಿಗೆ ತಡವಾಗುತ್ತದೆ ಎಂದು ನಿರ್ವಾಹಕರ ಬಳಿ ಜಗಳ ಮಾಡುತ್ತಿದ್ದಾರೆ. ಸಾಮಾನ್ಯ ಸಾರಿಗೆಗಳಲ್ಲಿ ಈ ರೀತಿಯಾದ ಹೆಚ್ಚಿನ ಹಂತಗಳನ್ನು ಅಳವಡಿಸಿರುವುದರಿಂದ ವಾಹನವನ್ನು ನಿಲ್ಲಿಸಿ ಟಿಕೆಟ್ ವಿತರಣೆ ಮಾಡುವುದರಿಂದ ನೇರ ಪ್ರಯಾಣಿಕರು ಬಸ್‌ನಲ್ಲಿ ಬರದೇ ಇರುವುದರಿಂದ ಆದಾಯ ಕಡಿಮೆಯಾಗುತ್ತದೆ.

ನಮ್ಮ ಸಂಸ್ಥೆಯಲ್ಲಿ ಒಂದು ಹಂತದಿAದ ಇನ್ನೊಂದು ಹಂತಕ್ಕೆ ಆರರಿಂದ ಏಳು ಕಿಲೋಮೀಟರ್ ಮತ್ತು ಉಪಹಂತಗಳು ೨.೫ ಕಿ ಮೀ ನಿಂದ ೩ ಕಿ.ಮೀ. ಅಂತರ ಇದ್ದು ಈ ಹಂತಗಳಿಗೆ ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಹೊಸದಾಗಿ ಅಳವಡಿಸಿರುವ ಕೆಲವು ಉಪ ಹಂತಗಳು ೧೦೦ ಮೀಟರ್ ನಿಂದ ೨೦೦ ಮೀಟರ್‌ಗಳಿರುತ್ತವೆ. ಇಷ್ಟು ಕಡಿಮೆ ಅಂತರದಲ್ಲಿ ಹಂತಗಳನ್ನು ಅಳವಡಿಸಿದರೆ ಕರ್ತವ್ಯ ನಿರ್ವಹಿಸಲು ಅಸಾಧ್ಯ ಎಂದು ನಿರ್ವಹಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ ಮಾರ್ಗದ ಚಾಲನಾ ಸಿಬ್ಬಂದಿಗಳಿಗೆ ಹೊಸದಾಗಿ ಅಳವಡಿಸಿರುವ ಉಪಹಂತಗಳಲ್ಲಿ ತನಿಖಾಧಿಕಾರಿಗಳು ಇಳಿಯುವ ಪ್ರಯಾಣಿಕರನ್ನು ತಪಾಸಣೆ ಮಾಡದೆ ಬಸ್ಸಿನೊಳಗೆ ಹತ್ತಿ ಟಿಕೆಟ್ ವಿತರಣೆ ಮಾಡದವರಿಗೂ ಕೂಡ ಪ್ರಕರಣ ದಾಖಲಿಸುತ್ತಿದ್ದು, ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಉಪಹಂತಗಳನ್ನು ರದ್ದುಪಡಿಸಿ ಮೊದಲಿನ ನಿಯಮವನ್ನು ಮುಂದುವರೆಸಲು ಆಗ್ರಹಿಸಿದ್ದಾರೆ.

-ವರದಿ : ಟಿ.ಜಿ. ಸತೀಶ್