ಮಡಿಕೇರಿ, ಸೆ. ೨೬: ಐತಿಹಾಸಿಕ ದಸರಾದ ಅಂಗವಾಗಿ ಮೈಸೂರಿನಲ್ಲಿ ವಿಜೃಂಭಣೆಯಿAದ ನಡೆಯುವ ದಸರಾ ಸ್ತಬ್ಧಚಿತ್ರಕ್ಕೆ ಜಿಲ್ಲೆಯಿಂದ ಇಲ್ಲಿನ ಧಾರ್ಮಿಕ ಕ್ಷೇತ್ರದ ವೈಭವ ಹಾಗೂ ಪ್ರಕೃತಿ ಸೌಂದರ್ಯ ಅನಾವರಣಗೊಳ್ಳಲಿದೆ. ‘ಕೈಬೀಸಿ ಕರೆಯುತ್ತಿದೆ ಕೊಡಗೆಂಬ ಬೆಡಗು’ ಎಂಬ ಶೀರ್ಷಿಕೆಯಲ್ಲಿ ಸ್ತಬ್ಧಚಿತ್ರ ರೂಪು ಪಡೆಯುತ್ತಿದೆ.
ಜಿಲ್ಲಾ ಪಂಚಾಯಿತಿ ಸೂಚನೆ ಅನ್ವಯ ಜಿಲ್ಲಾ ಗ್ರಾಮೀಣ ಕೈಗಾರಿಕಾ ವಿಭಾಗ ಅಂದಾಜು ರೂ. ೮.೫೦ ರಿಂದ ೯ ಲಕ್ಷ ವೆಚ್ಚದಲ್ಲಿ ಬ್ರಹ್ಮಗಿರಿ ಬೆಟ್ಟದ ಸೊಬಗು, ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರ ಸೇರಿದಂತೆ ಇರ್ಪು, ಮಲ್ಲಳ್ಳಿ ಜಲಪಾತಗಳು, ಕಾಫಿ ಹಾಗೂ ಕಿತ್ತಳೆ ಸ್ತಬ್ಧಚಿತ್ರದಲ್ಲಿ ಪ್ರಸ್ತುತಗೊಳ್ಳಲಿದೆ. ಅದರೊಂದಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮ ಮಟ್ಟದಲ್ಲಿ ಸ್ಥಾಪನೆಯಾಗಿರುವ ಡಿಜಿಟಲ್ ಗ್ರಂಥಾಲಯ ಬಗ್ಗೆಯೂ ಸ್ತಬ್ಧಚಿತ್ರ ರಚನೆಯಾಗಲಿದೆ. ಬ್ರಹ್ಮಗಿರಿ ಬೆಟ್ಟದ ಜೊತೆ ಜಲಪಾತಗಳು, ತಲಕಾವೇರಿಯ ತೀರ್ಥೋದ್ಭವ ಜಾಗ, ಭಾಗಮಂಡಲದ ಭಗಂಡೇಶ್ವರ ಕ್ಷೇತ್ರವನ್ನು ಕೃತಕವಾಗಿ ಸೃಷ್ಟಿಸಲಾಗುತ್ತದೆ. ಇದರೊಂದಿಗೆ ಅದರ ವಿಶೇಷತೆಯನ್ನು ತಿಳಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಕೊಡಗಿನ ಕಾಫಿಯ ಸ್ವಾದವನ್ನು ಪರಿಚಯಿಸುವ ಕೆಲಸವೂ ಆಗುತ್ತಿದೆ.
ವಿಜಯದಶಮಿ ದಿನದಂದು ಮೈಸೂರಿನ ರಾಜಬೀದಿಯಲ್ಲಿ ಸ್ತಬ್ಧಚಿತ್ರ ಸಾಗಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳು ಸ್ತಬ್ಧಚಿತ್ರಗಳು ಇರಲಿವೆ. ಏಜೆನ್ಸಿಯೊಂದು ಸ್ತಬ್ಧಚಿತ್ರವನ್ನು ರಚನೆ ಮಾಡುವ ಜವಾಬ್ದಾರಿ ಹೊತ್ತಿದ್ದು, ಇದಕ್ಕಾಗಿ ಮಡಿಕೇರಿಯ ಗ್ರಾಮೀಣ ಕೈಗಾರಿಕ ವಿಭಾಗದ ಉಪನಿರ್ದೇಶಕ ಸಿ.ಎನ್. ರಘು ಅವರು ನೋಡೆಲ್ ಅಧಿಕಾರಿಯಾಗಿ ನಿಯೋಜನೆ ಗೊಂಡಿದ್ದಾರೆ.