ಮಡಿಕೇರಿ, ಸೆ. ೨೬: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಪ್ರಯುಕ್ತ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು ಚಾಲನೆ ನೀಡಲಾಯಿತು.
ನಗರದ ಪಂಪಿನ ಕೆರೆಯಲ್ಲಿ ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ, ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿಕಾಮಾಕ್ಷಿಯಮ್ಮ ಕರಗಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಕುಂದುರುಮೊಟ್ಟೆ ಕರಗವನ್ನು ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ಕರಗವನ್ನು ಉಮೇಶ್ ಸುಬ್ರಮಣಿ, ಕಂಚಿ ಕಾಮಾಕ್ಷಿ ಕರಗವನ್ನು ನವೀನ್ ಹೊತ್ತಿದ್ದರು.
ಚಾಮಿ ಅವರು ಕಳೆದ ೪೮ ವರ್ಷಗಳಿಂದ ಕರಗ ಹೊರುತ್ತಿದ್ದು, ಉಮೇಶ್ ಅವರು ೫೦ ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಉಮೇಶ್ ಸುಬ್ರಮಣಿ ೨೭ ವರ್ಷಗಳಿಂದ, ನವೀನ್ ೧೫ ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಕರಗ ಸಾಗುವ ಮಾರ್ಗದಲ್ಲಿ ಭಕ್ತಿಯಿಂದ ಈಡುಗಾಯಿ, ಆರತಿ ಸೇವೆಗಳು ನಡೆದವು. ಮಡಿವಾಳ ಸಮಾಜದಿಂದ ಕರಗಗಳಿಗೆ ಪೂಜೆ ಸಲ್ಲಿಸಲಾಯಿತು.
ಪೂಜೆ ಬಳಿಕ ಕುಂದುರುಮೊಟ್ಟೆ ಹಾಗೂ ದಂಡಿನ ಮಾರಿಯಮ್ಮ ಕರಗ ಮೊದಲಿಗೆ ಪ್ರದಕ್ಷಿಣೆ ಹೊರಟರೆ ನಂತರ ಕೋಟೆ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಿ ಕರಗಗಳು ಪ್ರದಕ್ಷಿಣೆ ಆರಂಭಿಸಿದವು. ನಂತರ ನಾಲ್ಕು ಕರಗಗಳು ಬನ್ನಿ ಮಂಟಪ, ಕೋದಂಡ ರಾಮ ದೇವಾಲಯ, ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ಸನ್ನಿಧಿಗೆ ಹಾಗೂ ಪೇಟೆ ಶ್ರೀ ರಾಮಮಂದಿರಕ್ಕೆ ತೆರಳಿ ಪೂಜೆಯ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ಹಿಂತಿರುಗಿದವು.
ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾಧಿಕಾರಿ ಬಿ.ಸಿ ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಖಜಾಂಚಿ ಶ್ವೇತಾ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ನಗರಸಭಾ ಆಯುಕ್ತ ವಿಜಯ ಮತ್ತಿತರರು ಪಾಲ್ಗೊಂಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ೪ ವರ್ಷಗಳ ಬಳಿಕ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದು, ನಾಡಿನ ಸುಭೀಕ್ಷೆಗಾಗಿ ಶಕ್ತಿ ದೇವತೆಗಳನ್ನು ಪ್ರಾರ್ಥಿಸಿದ್ದಾಗಿ ಹೇಳಿದರು.