ಕೂಡಿಗೆ, ಸೆ. ೨೫: ಕೂಡಿಗೆ ಗ್ರಾಮ ಪಂಚಾಯಿತಿ ಹುದುಗೂರು ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ವಿಮಲ ಅವರ ಅಧ್ಯಕ್ಷೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವುದರ ಮೂಲಕ ಹಣವನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು. ಅಲ್ಲದೆ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡಕ್ಕೆ ಒಕ್ಕೂಟದ ವತಿಯಿಂದ ಈ ಸಾಲಿನಲ್ಲಿ ೮ ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದರು. ಸಂಘದ ದಾಖಲೆಯನ್ನು ಸಮರ್ಪಕವಾಗಿ ಒದಗಿಸಿದರೆ ಒಕ್ಕೂಟದ ತೀರ್ಮಾನದಂತೆ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿದ್ದ ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಅವರು ಮಾತನಾಡಿ, ಒಕ್ಕೂಟದ ವತಿಯಿಂದ ರೈತರ ಹಸುಗಳಿಗೆÀ ಉಚಿತವಾಗಿ ತಪಾಸಣೆ ಔಷಧೋಪಚಾರ ಮಾಡಿಕೊಡಲಾಗುವುದು. ಅಲ್ಲದೆ ನಿಗದಿತ ಸಮಯದಲ್ಲಿ ಪಶು ಆಹಾರವನ್ನು ಒದಗಿಸಲಾಗುವುದು. ಹಾಲಿನ ಗುಣಮಟ್ಟ ಹೆಚ್ಚಲು ಬೇಕಾಗುವ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷೆ ರೋವಿನ್, ನಿರ್ದೇಶಕರಾದ ಜಮುನಾ, ಪುಟ್ಟಮ್ಮ, ರತ್ನಮ್ಮ, ಉಮಾ, ಪೂರ್ಣಿಮಾ, ಸಮಾ, ಕಾರ್ಯದರ್ಶಿ ಜಾನಕಿ ಸೇರಿದಂತೆ ಮಹಿಳಾ ಸದಸ್ಯರು ಹಾಜರಿದ್ದರು.