ನಾಪೋಕ್ಲು, ಸೆ. ೨೫: ಪರಸ್ಪರ ಸಹಕಾರದೊಂದಿಗೆ ನಮ್ಮ ಹಿರಿಯರು ಆರಂಭಿಸಿದ ದವಸ ಭಂಡಾರಗಳು ಇಂದು ಶತಮಾನೋತ್ಸವ ಆಚರಿಸುತ್ತಿರುವದು ಹೆಮ್ಮೆಯ ವಿಚಾರ ಎಂದು ಕುಂಜಿಲ-ಕಕ್ಕಬ್ಬೆ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಹೇಳಿದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ದವಸ ಭಂಡಾರದ ೧೦೨ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ೧೦೨ ವರ್ಷಗಳ ಹಿಂದೆ ಪರಿಯಂಗೇರಿ ಎಂಬ ಹೆಸರಿನಿಂದ ಸ್ಥಾಪಿತವಾದ ಈ ದವಸ ಭಂಡಾರವು ಈಗ ಕುಂಜಿಲ ವಿವಿಧೋದ್ದೇಶ ಸಹಕಾರ ದವಸ ಭಂಡಾರ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಿಂದೆ ಹಿರಿಯರು ಸಂಘದ ಸದಸ್ಯರಿಂದ ಭತ್ತವನ್ನು ಪಡೆದು ಆ ಭತ್ತವನ್ನು ಕಷ್ಟದಲ್ಲಿರುವ ಸದಸ್ಯರಿಗೆ ಕಡಿಮೆ ಬಡ್ಡಿ ರೂಪದಲ್ಲಿ ನೀಡಿ ಸಹಕರಿಸಿಕೊಂಡು ಬಂದಿದ್ದಾರೆ. ಇದು ಬೆಳೆದು ಇಂದು ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಅವರ ಅನುದಾನದಲ್ಲಿ ದವಸ ಭಂಡಾರಕ್ಕೆ ರೂ. ೪ ಲಕ್ಷ ಅನುದಾನ ದೊರೆತಿರುವದು ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು. ಸದಸ್ಯರ ಪಾಲು ಬಂಡವಾಳ ಹಣವನ್ನು ರೂ. ೧,೦೦೦ ನಿಂದ ರೂ. ೧,೫೦೦ ವರೆಗೆ ಹೆಚ್ಚಿಸುವ ಬಗ್ಗೆ ಹಾಗೂ ಮರಣ ನಿಧಿಯನ್ನು ರೂ. ೩,೦೦೦ ನಿಂದ ರೂ. ೫,೦೦೦ ವರೆಗೆ ಹೆಚ್ಚಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಕಲ್ಯಾಟಂಡ ಮುತ್ತಪ್ಪ, ಕಲ್ಯಾಟಂಡ ಚಂಗಪ್ಪ, ಬಾಚಮಂಡ ಪೂವಣ್ಣ, ಕಣಿಯರ ನಾಣಯ್ಯ, ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ೧೦ನೇ ಮತ್ತು ೧೨ನೇ ತರಗತಿಯಲ್ಲಿ ಹೆಚ್ಚಿನ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎಂ. ಆಲಿ, ಕಾರ್ಯದರ್ಶಿ ಕೆ.ಎಂ. ಕುಂಞಪ್ಪ, ನಿರ್ದೇಶಕರಾದ ಕೆ.ಡಿ. ಅಪ್ಪಣ್ಣ, ಪಿ.ವಿ. ಕೃಷ್ಣಯ್ಯ, ಕೆ.ಎನ್. ನಾಣಯ್ಯ, ಕೆ.ಸಿ. ಪಳಂಗಪ್ಪ, ಕೆ.ಎಂ. ಕಾಳಪ್ಪ, ಕೆ.ಕೆ. ಅಯ್ಯಪ್ಪ, ಎನ್.ಎಂ. ಸುಬ್ರಮಣಿ, ಪಿ.ಎಂ. ಶೋಜು, ಡಾಟಿ ಅಯ್ಯಪ್ಪ, ಇದ್ದರು.