ಮಡಿಕೇರಿ, ಸೆ. ೨೫: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ದಸರಾ ಸಮಿತಿ ಅಧ್ಯಕ್ಷೆ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು.

ಕಾವೇರಿ ಕಲಾಕ್ಷೇತ್ರದಲ್ಲಿಂದು ನಡೆದ ದಸರಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾ. ೨೬ ರಂದು ಕರಗ ಉತ್ಸವ ಆರಂಭಗೊಳ್ಳಲಿದ್ದು, ತಾ. ೨೭ ರಿಂದ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಸಮಿತಿಯಿಂದ ಕೈಗೊಳ್ಳಲಾಗಿದ್ದು, ದಸರಾ ಜನೋತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಅನಿತಾ ಪೂವಯ್ಯ ಮನವಿ ಮಾಡಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ನವರಾತ್ರಿ ಪ್ರಯುಕ್ತ ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ ಒಂಭತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಪ್ರತಿ ದಿನವೂ ಸಭಾಕಾರ್ಯ ಕ್ರಮದ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ತಿಳಿಸಿದರು.

ಅಸಮಾಧಾನ: ಸಭೆಯ ಆರಂಭದಲ್ಲಿ ಮಾತನಾಡಿದ ದಸರಾ ಸಮಿತಿ ಉಪಾಧ್ಯಕ್ಷ ಟಿ.ಹೆಚ್. ಉದಯಕುಮಾರ್ ದಸರಾ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ದಸರಾ ಉತ್ಸವಕ್ಕೆ ಆಹ್ವಾನ ನೀಡಲು ತೆರಳುವಾಗ, ಉತ್ಸವ ಸಂಬAಧ ಟೆಂಡರ್ ಪ್ರಕ್ರಿಯೆಗಳನ್ನು ನಡೆಸುವಾಗ ಸಮಿತಿಯ ಪದಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಉಪಾಧ್ಯಕ್ಷ ಸ್ಥಾನ

(ಮೊದಲ ಪುಟದಿಂದ) ಕೇವಲ ನೆಪಮಾತ್ರಕ್ಕೆ ಎಂಬAತಾಗಿದ್ದು, ಇದರಿಂದ ಅಸಮಾಧಾನವಾಗಿದೆ ಎಂದು ಹೇಳಿ ಸಭೆಯಿಂದ ಹೊರ ನಡೆದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಾಧ್ಯಕ್ಷ ರಮೇಶ್, ಇದು ಉದ್ದೇಶಪೂರ್ವಕವಾಗಿ ನಡೆದ ತಪ್ಪಲ್ಲ. ಆದರೂ ನಡೆದ ತಪ್ಪಿಗೆ ಕ್ಷಮೆ ಕೋರುತ್ತೇನೆ. ಆದರೆ ಅಸಮಾಧಾನ ವಿದೆ ಎಂದು ಹೇಳಿ ಸಭೆಯಿಂದ ಹೊರ ನಡೆದದ್ದು ಶೋಭೆ ತರುವಂತ ದ್ದಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ತಮ್ಮ ಜವಾಬ್ದಾರಿಗಳನ್ನು ಅರ್ಥೈಸಿ ಕೊಂಡು ಅಧ್ಯಕ್ಷರು, ಕಾರ್ಯಾಧ್ಯಕ್ಷ ರೊಂದಿಗೆ ಸಂಪರ್ಕವಿಟ್ಟುಕೊಳ್ಳಬೇಕು. ಆ ಕೆಲಸವನ್ನು ಮಾಡದೆ ಯಾವುದಕ್ಕೂ ಮಾಹಿತಿ ನೀಡಲಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ದಸರಾ ಉತ್ಸವಕ್ಕೆ ಬಿಡುಗಡೆ ಯಾದ ಸರಕಾರದ ಅನುದಾನ ಸಂಪೂರ್ಣವಾಗಿ ದಸರಾ ಉತ್ಸವಕ್ಕೆ ಬಳಕೆ ಆಗಬೇಕು. ದಸರಾ ಸಮಿತಿ ಬೇರೆಡೆಯಿಂದ ಹಣ ಸಂಗ್ರಹಾತಿ ಮಾಡಬಾರದು. ಇದರಿಂದ ದಶಮಂಟಪ ಸಮಿತಿಗಳಿಗೆ ಹಣ ಸಂಗ್ರಹಾತಿಗೆ ತೊಂದರೆ ಆಗುತ್ತದೆ ಎಂದು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ಗಾಂಧಿ ಮೈದಾನದಲ್ಲಿ ಗ್ಯಾಲರಿ ನಿರ್ಮಾಣ ಸಂಬAಧ ಹೆಚ್ಚಿನ ಹಣದ ಅವಶ್ಯಕತೆಯಿದ್ದು, ಅದಕ್ಕಾಗಿ ದಸರಾ ಅನುದಾನದಲ್ಲಿ ೨೫ ಲಕ್ಷ ಹಣವನ್ನು ಶಾಸಕರ ಮನವಿಯಂತೆ ಕಾಮಗಾರಿಗೆ ನೀಡಬೇಕಾಗಿರುವುದ ರಿಂದ ಬೇರೆಡೆಯಿಂದ ಹಣ ಸಂಗ್ರಹ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ರಮೇಶ್ ಹೇಳಿದರು. ಇದಕ್ಕೆ ನಮ್ಮ ವಿರೋಧವಿದೆ ಎಂದು ಉಮೇಶ್ ಸುಬ್ರಮಣಿ ಹೇಳಿದರು.

ಈ ಸಂದರ್ಭ ಮಾತನಾಡಿದ ಮಾಜಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ದಸರಾ ಉತ್ಸವಕ್ಕೆ ಬಿಡುಗಡೆಯಾದ ಹಣವನ್ನು ದಸರಾಕ್ಕಾಗಿಯೆ ಬಳಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಶಾಸಕರನ್ನು ಒಪ್ಪಿಸೋಣ. ಗ್ಯಾಲರಿ ಕಾರ್ಯಕ್ಕೆ ಬೇಕಾದ ಹೆಚ್ಚುವರಿ ಹಣವನ್ನು ಹೊಂದಿಸುವ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುತ್ತೇನೆ. ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡೋಣ ಎಂದು ಹೇಳಿದರು.

ದಸರಾ ಸಮಿತಿ ಪದಾಧಿಕಾರಿ ಗಜೇಂದ್ರ, ಡಿಶು ಮಾತನಾಡಿ ದಸರಾ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸವನ್ನು ದಸರಾ ಸಮಿತಿ ಮಾಡಬೇಕು ಎಂದು ಹೇಳಿದರು. ನೆರವಂಡ ಜೀವನ್ ಮಾತನಾಡಿ, ಪದಾಧಿಕಾರಿಗಳಿಗೆ ಸಭಾ ಆಮಂತ್ರಣ ವನ್ನು ಸರಿಯಾದ ರೀತಿಯಲ್ಲಿ ಕ್ರಮಬದ್ಧವಾಗಿ ನೀಡುವಂತಾಗ ಬೇಕೆಂದು ಹೇಳಿದರು.

ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ, ಮಡಿಕೇರಿ ದಸರಾ ಉತ್ಸವಕ್ಕೆ ಸರಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡು ವಂತಾಗಬೇಕು ಎಂದರು. ಇದೇ ಸಂದರ್ಭ ದಸರಾ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭ ನಗರಸಭಾ ಉಪಾಧ್ಯಕ್ಷೆ, ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತಾ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಹರೀಶ್, ದಶಮಂಟಪ ಸಮಿತಿ ಅಧ್ಯಕ್ಷ ಮನುಮಂಜುನಾಥ್ ಮತ್ತಿತರರು ಇದ್ದರು.