ಸುಂಟಿಕೊಪ್ಪ, ಸೆ. ೨೪: ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘ ೨೦೨೧-೨೦೨೨ನೇ ಸಾಲಿನಲ್ಲಿ ರೂ. ೪೬ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೧೩ ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಬಿ. ರಮೇಶ್ ಚಂಗಪ್ಪ ಹೇಳಿದರು.

ಸಂಘದ ೬೩ನೇ ವಾರ್ಷಿಕ ಮಹಾಸಭೆಯು ಗುಂಡುಗುಟ್ಟಿ ಶ್ರೀ ಮಂಜುನಾಥಯ್ಯ ಸಹಕಾರ ಭವನದಲ್ಲಿ ಸಂಘದ ಅಧ್ಯಕ್ಷ ರಮೇಶ್ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ೩೧.೦೩.೨೦೨೨ಕ್ಕೆ ಸಂಘದಲ್ಲಿ ೧೯೫೩ ಮಂದಿ ಸದಸ್ಯರು ಗಳಿದ್ದಾರೆ ‘ಎ’ ಸದಸ್ಯರ ಪಾಲು ಹಣ ರೂ. ೧ ಕೋಟಿ ೫೮ ಲಕ್ಷದ ೭೫ ಸಾವಿರ ಆಗಿದೆ. ‘ಸಿ’ ತರಗತಿಯ ಪಾಲು ಹಣ ೨ ಲಕ್ಷ ೩೫ ಸಾವಿರ ಇದೆ ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ಸಾಲ ವಸೂಲಾತಿಯು ೯೮.೨ ರಷ್ಟಿದ್ದು ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯು ಜಾರಿಯಲ್ಲಿದ್ದು ಸಂಘವು ಆರು ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬ್ಯಾಂಕಿನ ೮ ಶಾಖೆಗಳಲ್ಲಿ ವಿವಿಧ ರೀತಿಯ ಸಾಲ ಮತ್ತು ಕೃಷಿ ಅಭಿವೃದ್ಧಿಗಾಗಿ ಸರಕಾರ ನಿಗದಿಪಡಿಸಿದ ರಿಯಾಯಿತಿ ಬಡ್ಡಿ ದರಗಳಲ್ಲಿ ಸಾಲ ನೀಡಲಾಗುತ್ತಿದ್ದು, ಸದಸ್ಯರು ಇದರ ಸದುಪಯೋಗವನ್ನು ಪಡೆಯ ಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.

ಸದಸ್ಯರುಗಳ ಅಸಮಾಧಾನ: ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘ ಹೋಬಳಿ ಕೇಂದ್ರದಲ್ಲಿದ್ದು ವಾಣಿಜ್ಯ ಮಳಿಗೆಗಳಿಂದಲೇ ಬಾಡಿಗೆ ರೂಪದಲ್ಲಿ ಸಂಘಕ್ಕೆ ಆದಾಯ ಸಂದಾಯವಾಗುತ್ತಿದೆ. ಕೊಡಗಿನ ಗ್ರಾಮೀಣ ಪ್ರದೇಶವಾದ ಚೆಟ್ಟಳ್ಳಿ, ಟಿ. ಶೆಟ್ಟಗೇರಿ, ಮಾದಾಪುರ, ಐಗೂರು ಮೊದಲಾದ ಸಂಘದಲ್ಲಿ ರೂ. ೫೦ ಲಕ್ಷಕ್ಕೂ ಹೆಚ್ಚು ಲಾಭ ಬರುತ್ತಿದೆ. ಸುಂಟಿಕೊಪ್ಪದ ಸಂಘದ ಲಾಭ ಗಣನೀಯವಾಗಿ ಕುಸಿದಿದೆ ಎಂದು ಸದಸ್ಯರುಗಳಾದ ಕೆ.ಡಿ. ರಾಮಯ್ಯ, ಬಿಲೀಯರ ಜವಹರ್, ಕರುಣ, ಕೆ.ಎಂ. ಲಕ್ಷö್ಮಣ, ಬಾಲಕೃಷ್ಣ ರೈ, ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷರ ಪರವಾಗಿ ಮಾತನಾಡಿದ ಹಿರಿಯ ನಿರ್ದೇಶಕ ಎಂ.ಎನ್. ಕೊಮಾರಪ್ಪ ಚಿನ್ನಾಭರಣ ಸಾಲ ಸೇರಿದಂತೆ ಕೆಲ ಸಾಲದ ಬಡ್ಡಿ ದರವನ್ನು ಸದಸ್ಯರುಗಳ ಅನುಕೂಲಕ್ಕಾಗಿ ಇಳಿಸಿದ್ದರಿಂದ ಲಾಭಾಂಶ ಕುಂಠಿತವಾಗಿದೆ. ಸದಸ್ಯರುಗಳಿಗೆ ಹೆಚ್ಚಿನ ಹೊರೆ ಆಗಬಾರದೆಂದು ಆಡಳಿತ ಮಂಡಳಿ ಉದ್ದೇಶವಾಗಿದೆ ಎಂದು ಸಮಜಾಯಿಸಿಕೆ ನೀಡಿದರು.

ಸೂಪರ್ ಮಾರ್ಕೆಟ್ ಅನ್ನು ಸಂಘದ ಕಟ್ಟಡದಲ್ಲಿ ನಿರ್ಮಿಸಲು ಕಳೆದ ಸಭೆಯಲ್ಲಿ ನಿರ್ಣಯಿಸಿದ್ದು ಇದೀಗ ಸೂಪರ್ ಮಾರ್ಕೆಟ್ ಖಾಸಗಿಯವರಿಗೆ ನೀಡಲು ಟೆಂಡರ್ ಕರೆಯಲಾಗಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯ ಜವಹರ್ ಆಡಳಿತ ಮಂಡಳಿಯವರಿಗೆ ದೂರದೃಷ್ಟಿ ಇಲ್ಲ. ಬೇಕಾಬಿಟ್ಟಿ ಆಡಳಿತ ನಡೆಸುತ್ತಿರುವುದರಿಂದ ಸಂಘದ ಅಧೋಗತಿಗೆ ಇಳಿದಿದೆ ಎಂದೂ ಆರೋಪಿಸಿ ಸಹಕಾರ ಸಂಘದಿAದಲೇ ಸೂಪರ್ ಮಾರ್ಕೆಟ್ ನಡೆಸಿ. ಇದಕ್ಕೆ ಸದಸ್ಯರುಗಳ ಬೆಂಬಲ ಇದೆ ಹೇಳಿದರು.

ಜಾಮೀನು ಸಾಲದಿಂದ ಸಂಘಕ್ಕೆ ಲಾಭ ಬರುತ್ತಿದೆ ಜಾಮೀನು ಸಾಲದ ಮೊತ್ತ ಹೆಚ್ಚಿಸಿ ಎಂದು ಎಂ.ಎ.ವಸAತ ಆಗ್ರಹಿಸಿದರು. ಈ ಬಾರಿ ಸಕಾಲದಲ್ಲಿ ರಾಸಾಯನಿಕ ಗೊಬ್ಬರ ಸಂಘದಿAದ ಲಭ್ಯವಾಗದೆ ಇರುವುದರಿಂದ ನಾವುಗಳು ಕುಶಾಲನಗರದಿಂದ ಗೊಬ್ಬರ ತರಿಸಿದೆವು ಎಂದು ಚಿಕ್ಕಂಡ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಟಿ.ವಿ. ನಾಣಯ್ಯ, ಎ.ಎಸ್. ಆನಂದ, ಎನ್.ಎಸ್. ಕೃಷ್ಣಪ್ಪ ಅವರುಗಳು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡಿದ್ದು ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡಾ. ಶಶಿಕಾಂತ ರೈ, ನಿರ್ದೇಶಕರುಗಳಾದ ಜಿ.ಜಿ. ಕೋಮಲ, ಎಂ.ಎನ್. ಕೊಮಾರಪ್ಪ, ಎನ್.ಸಿ. ಪೊನ್ನಪ್ಪ, ಕೆ.ಎಸ್. ಮಂಜುನಾಥ್, ಜರ್ಮಿ ಡಿಸೋಜ, ಡಿ.ಕೆ. ಗಂಗಾಧರ, ಕೆ.ಪಿ. ಜಗನ್ನಾಥ್, ಆರ್.ಟಿ. ಲಾಂಛನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಸುಮಿತ್ರ ಉಪಸ್ಥಿತರಿದ್ದರು.