ಗೋಣಿಕೊಪ್ಪಲು, ಸೆ. ೨೪: ಹುಲಿ ದಾಳಿಗೆ ಕಾರ್ಮಿಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೈನ್ ಗೇಟ್ ಬಳಿ ನಡೆದಿದೆ.
ಜೇನು ಕುರುಬರ ದಾಸ (ಕೃಷ್ಣ-೫೨) ಹುಲಿ ದಾಳಿಗೆ ಪ್ರಾಣ ಕಳೆದುಕೊಂಡ ದುರ್ಧೈವಿ. ತಾ. ೨೪ರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹುಲಿಯು ದಾಸನ ಮೇಲೆರಗಿ ತೀವ್ರ ಗಾಯಗೊಳಿಸಿ ಕೊಂದು ಹಾಕಿದೆ. ಘಟನೆ ಸಂದರ್ಭ ಸ್ಥಳದಲ್ಲಿದ್ದ ಹಾಡಿ ನಿವಾಸಿಗಳಾದ ರಾಜ, ಶಿವಪ್ಪ,ರವಿ ಹಾಗೂ ರಂಗ ಹುಲಿಯಿಂದ ತಪ್ಪಿಸಿಕೊಂಡು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ತಾ. ೨೪ರಂದು ಕಾನೂರು ಸಮೀಪದ ಬೊಮ್ಮಾಡು ಹಾಡಿಯ ನಿವಾಸಿ ಒಬ್ಬರಿಗೆ ಸೇರಿದ ಹಸುವನ್ನು ಪಕ್ಕದ ತೋಟದಲ್ಲಿ ಮೇಯಲು ಬಿಟ್ಟ ಸಂದರ್ಭ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಗಾಯಗೊಳಿಸಿತ್ತು. ತೀವ್ರ ಸ್ವರೂಪದ ಗಾಯಗೊಂಡಿದ್ದ ಹಸು ಜೀವನ್ಮರಣ ಸ್ಥಿತಿಯಲ್ಲಿ ನರಳಿ ತಾ. ೨೫ ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತ್ತು.
ಹಸುವಿನ ಮೃತದೇಹವನ್ನು ಮಣ್ಣು ಮಾಡುವ ಸಲುವಾಗಿ ಚೈನ್ಗೇಟ್ಗೆ ಕಾರ್ಮಿಕರು ತೆರಳುತ್ತಿದ್ದ ಸಂದರ್ಭ ತೋಟದಲ್ಲಿ ಮರೆಯಾಗಿದ್ದ ಹುಲಿ ದಿಢೀರನೆ ಓಡಿ ಬಂದಿದೆ. ಹಸುವನ್ನು ಮಣ್ಣು ಮಾಡಲೆಂದು ಹೋಗುತ್ತಿದ್ದ ಕಾರ್ಮಿಕರ ಪೈಕಿ ದಾಸ ಕೊನೆಯಲ್ಲಿ ನಡೆಯುತ್ತಿದ್ದ ಹೀಗಾಗಿ ಹಿಂಬದಿಯಿAದ ಬಂದ ವ್ಯಾಘ್ರ ಆತನ ಬೆನ್ನಿನ ಮೇಲೆ ಹಾರಿ ಬೀಳಿಸಿ ದಾಳಿ ನಡೆಸಿದೆ. ಜೊತೆಯಲ್ಲಿದ್ದವರು ಬೊಬ್ಬೆ ಹಾಕಿದರೂ ದಾಳಿ ನಿಲ್ಲಿಸದ ಹಿನ್ನೆಲೆ ಪ್ರಾಣಭಯದಿಂದ ಇತರರು ಅಲ್ಲಿಂದ ಓಡಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿ ಘಟನಾ ಸ್ಥಳಕ್ಕೆ ಬಂದಾಗ ದಾಸ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾನೆ. ಮೃತ ಹಸುವಿನ ವಾಸನೆ ಹುಲಿಗೆ ಗೊತ್ತಾದ ಹಿನ್ನೆಲೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಜನರ ಆಕ್ರೋಶ: ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷö್ಯ ಕಾರಣ ಎಂದು ಆರೋಪಿಸಿ ಸ್ಥಳೀಯರು ಹುಲಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಹುಲಿ ದಾಳಿಯಿಂದ ಮೃತಪಟ್ಟ ಹಸುವನ್ನು ಹೂಳುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳ ಬಾರದೆ (ಮೊದಲ ಪುಟದಿಂದ) ಕಾರಣಕ್ಕಾಗಿ ಅಮಾಯಕ ಕಾರ್ಮಿಕ ಬಲಿಯಾಗಿದ್ದಾನೆ. ಹುಲಿ ಓಡಾಟ ಇರುವುದರಿಂದ ಹಸುವನ್ನು ಹೂಳಲು ಅರಣ್ಯ ಇಲಾಖೆ ಮುಂದಾಗಬೇಕಾಗಿತ್ತು. ಇದಕ್ಕೆ ಅರಣ್ಯ ಇಲಾಖೆ ಕಾರಣವಾಗಿದ್ದು, ಅಧಿಕಾರಿಯ ಮೇಲೆ ಪೊಲೀಸ್ ಪ್ರಕರಣ ದಾಖಲಿಸುವಂತೆ ಗಿರಿಜನ ಮುಖಂಡ ಜೆ.ಕೆ.ತಿಮ್ಮ ಆಗ್ರಹಿಸಿದರು.
ಸುದ್ದಿ ತಿಳಿದ ರೈತ ಸಂಘದ ಪದಾಧಿಕಾರಿಗಳಾದ ಚೆಟ್ರುಮಾಡ ಸುಜಯ್, ಪುಚ್ಚಿಮಾಡ ಸುಭಾಷ್, ಆಲೆಮಾಡ ಮಂಜುನಾಥ್, ಚೊಟ್ಟೆಕಾಳಪಂಡ ಮನು, ಮಲ್ಚೀರ ಅಶೋಕ್ ಮತ್ತಿತರರು ಕಾನೂರು ಆಸ್ಪತ್ರೆಗೆ ತೆರಳಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗ್ರಾಮದ ಪ್ರಮುಖರಾದ ಮಾಚಿಮಾಡ ರವೀಂದ್ರ, ಕಾಡ್ಯಮಾಡ ಭರತ್, ಅಣ್ಣಳಮಾಡ ನವೀನ್, ಚೆರಿಯಪಂಡ ದರ್ಶನ್, ಎಂ.ಕೆ. ರಾಜು, ಮನೆಯಪಂಡ ಮಂಜು, ಎಸ್.ಎಂ.ಬಸಪ್ಪ ಸೇರಿದಂತೆ ಇನ್ನಿತರ ಆಗಮಿಸಿ ಕೂಡಲೆ ಹುಲಿ ಸೆರೆಗೆ ಒತ್ತಾಯಿಸಿದರು.
ಸುದ್ದಿ ತಿಳಿದ ಮಡಿಕೇರಿ ಡಿಎಫ್ಓ ಎ.ಟಿ. ಪೂವಯ್ಯ, ನಾಗರಹೊಳೆ ಡಿಎಫ್ಓ ಶಿವರಾಂ ಬಾಬು, ಎಸಿಎಫ್ ದಯಾನಂದ, ನಾಗರಹೊಳೆ ಎಸಿಎಫ್ ಗೋಪಾಲ್, ಅಧಿಕಾರಿಗಳಾದ ಅಶೋಕ್ ಹುನಗುಂದ, ನೆಹರು ಆಸ್ಪತ್ರೆಯ ಆವರಣಕ್ಕೆ ಆಗಮಿಸುತ್ತಿದ್ದಂತೆಯೇ, ನೆರೆದಿದ್ದ ಗ್ರಾಮಸ್ಥರು ಹಾಗೂ ಆದಿವಾಸಿಗಳು ತಮ್ಮ ಅಸಮಾಧಾನ ಹೊರ ಹಾಕಿದರು.
ಹುಲಿ ಪತ್ತೆಗೆ ಕ್ರಮ - ಪರಿಹಾರದ ಭರವಸೆ
ನಂತರ ಮಾತನಾಡಿದ ಡಿಎಫ್ಓ ಎ.ಟಿ. ಪೂವಯ್ಯ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಹುಲಿಯನ್ನು ಸೆರೆ ಹಿಡಿಯಲು ಕ್ಯಾಮರ ಅಳವಡಿಸಲಾಗುತ್ತದೆ, ಸಿಬ್ಬಂದಿಗಳನ್ನು ಹಾಡಿಯಲ್ಲಿ ನಿಯೋಜಿಸಲಾಗುತ್ತದೆ, ಕೂಡಲೇ ೨ ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಈ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಪರಿಹಾರ ಕೂಡಲೇ ನೀಡಬೇಕು, ಹಾಡಿಗಳಿಗೆ ಸೋಲಾರ್ ಹಾಕಬೇಕು, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಮೃತ ದಾಸ ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.
ಸುಜಾ ಸೂಚನೆ : ಈ ಬಗ್ಗೆ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸೂಕ್ತ ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹುಲಿ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಚಿತ್ರ-ವರದಿ: ಹೆಚ್.ಕೆ. ಜಗದೀಶ್