ಕುಶಾಲನಗರ, ಸೆ.೨೨: ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸದೆ ಗ್ರಾಮ ಪಂಚಾಯಿತಿ ನೂತನ ವಾಣಿಜ್ಯ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲು ನಿರ್ಧರಿಸಿದ ಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಧಾರವನ್ನು ಖಂಡಿಸಿ ಸ್ಥಳೀಯ ಮಾಂಸ ಮಾರಾಟಗಾರರ ಸಂಘದ ವತಿಯಿಂದ ಪಂಚಾಯಿತಿ ಕಚೇರಿ ಮುಂಭಾಗ ಧರಣಿ ಪ್ರತಿಭಟನೆ ನಡೆಯಿತು.
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಲೈಸನ್ಸ್ ಆಧಾರದಲ್ಲಿ ಕೋಳಿ, ಆಡು, ಕುರಿ ಮಾಂಸ ಮಾರಾಟ ನಡೆಯುತ್ತಿದ್ದು, ಕೆಲವು ಸದಸ್ಯರು ಬಹುಮತದ ಆಧಾರದಲ್ಲಿ ವಾಣಿಜ್ಯ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲು ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ದೂರಿರುವ ಸಂಘದ ಅಧ್ಯಕ್ಷ ಮೀರಾ ಮೊಹಿದ್ದೀನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದರಿಂದ ಲೈಸನ್ಸ್ ಆಧಾರದಲ್ಲಿ ಮಾಂಸ ಮಾರಾಟ ಮಾಡುತ್ತಿರುವ ಅಂಗಡಿಗಳ ಮಾಲೀಕರು ಮತ್ತು ಕಾರ್ಮಿಕರು ಬೀದಿಪಾಲಾಗಬೇಕಿದೆ ಎಂದು ತಮ್ಮ ಅಳಲನ್ನು ತೋಡಿ ಕೊಂಡರು. ಈ ಸಂದರ್ಭ ಕಚೇರಿಗೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣುಕ ಸ್ವಾಮಿ ಮತ್ತು ಸದಸ್ಯರಾದ ಸುರೇಶ್ ಅವರುಗಳು ಪ್ರತಿಭಟನಾಕಾರರಿಗೆ ತಿಳುವಳಿಕೆ ಹೇಳಿ ನ್ಯಾಯ ಒದಗಿಸುವ ಭರವಸೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊAಡರು.
ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ಬಷೀರ್ ಅಹಮ್ಮದ್, ವಿನೋದ್‌ಕುಮಾರ್, ಸಲ್ಮಾನ್ ಮತ್ತಿತರರು ಇದ್ದರು.