ಮಡಿಕೇರಿ, ಸೆ. ೨೨: ದೇಶದ ವಿವಿಧೆಡೆ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಹಾಗೂ ಸಂಘಟನೆಯ ಕಚೇರಿ ಹಾಗೂ ಪ್ರಮುಖರ ಮನೆ ಮೇಲೆ ನಡೆದ ಎನ್‌ಐಎ ದಾಳಿ ಖಂಡಿಸಿ ಮಡಿಕೇರಿಯಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳು ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಪ್ರಮುಖರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಡಿಪಿಐ ಪ್ರಮುಖರಾದ ಅಮಿನ್ ಮೊಹಿಸಿನ್, ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರ ಮೇಲೆ ಎನ್‌ಐಎ ಹಾಗೂ ಇಡಿಯನ್ನು ಬಳಸಿಕೊಂಡು ದಾಳಿ ನಡೆಸಲಾಗುತ್ತಿದ್ದು, ಎಲ್ಲವೂ ರಾಜಕೀಯ ಪ್ರೇರಿತವಾಗಿದೆ. ಸರ್ಕಾರದ ಲೋಪಗಳನ್ನು ಪ್ರಶ್ನೆ ಮಾಡದಂತೆ ಕೇಂದ್ರ ಸರ್ಕಾರ ತಡೆಯುತ್ತಿದೆ. ಎಸ್‌ಡಿಪಿಐ, ಪಿಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳ ಮೇಲೆ ದಾಳಿ ನಡೆಸಿದರೂ ಯಾವುದೇ ಅಧಿಕೃತ ಆಧಾರ ಲಭ್ಯವಾಗದೆ ಸರ್ಕಾರದ ಏಜೆನ್ಸಿಗಳು ಹತಾಶ ಪರಿಸ್ಥಿತಿಯಲ್ಲಿದೆ ಎಂದು ಟೀಕಿಸಿದರು. ದೇಶದಲ್ಲಿ ನಡೆದ ಬಾಂಬ್ ಸ್ಪೋಟಗಳ ಹಿಂದೆ ಸಂಘ ಪರಿವಾರದ ಕೈವಾಡವಿರೋದಾಗಿ ಯಶ್ವಂತ್ ಶಿಂಧೆ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸದೆ ಎನ್‌ಐಎ ಮೌನ ಏಕೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಪಿಎಫ್‌ಐ ಅಧ್ಯಕ್ಷ ಶೌಕತ್ ಆಲಿ, ಮಡಿಕೇರಿ ನಗರಾಧ್ಯಕ್ಷ ರಿಯಾಜ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕ್ರಿಯೇಟಿವ್ ಖಲೀಲ್, ನಗರಾಧ್ಯಕ್ಷ ರಿಜ್ವಾನ್, ನಗರ ಉಪಾಧ್ಯಕ್ಷ ಮೈಕಲ್ ವೇಗಸ್, ನಗರಸಭಾ ಎಸ್‌ಡಿಪಿಐ ಸದಸ್ಯರಾದ ಮನ್ಸೂರ್, ಬಷೀರ್ ಮತ್ತಿತರರು ಇದ್ದರು.