ನಾಪೋಕ್ಲು, ಸೆ. ೨೩: ಆರ್‌ಟಿಸಿಯಲ್ಲಿ ಒಬ್ಬರ ಹೆಸರಿದ್ದರೆ ಮಾತ್ರ ಶೂನ್ಯ ಬಡ್ಡಿ ಸಾಲ ಸೇರಿದಂತೆ ಸರಕಾರದಿಂದ ನೀಡಲಾಗುವ ಇತರ ಸವಲತ್ತುಗಳನ್ನು ಪಡೆಯಲು ಸಾಧ್ಯ. ಸಂಘದ ಎಲ್ಲಾ ಸದಸ್ಯರು ಆರ್‌ಟಿಸಿಯನ್ನು ಒಬ್ಬರ ಹೆಸರಿಗೆ ಮಾಡಿಕೊಂಡರೆ ಸರಕಾರದ ಸವಲತ್ತು ಪಡೆದುಕೊಳ್ಳಲು ಸಾಧ್ಯ ಎಂದು ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಸಲಹೆ ನೀಡಿದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ರೈತರಿಗೆ ಹಲವು ಅನುಕೂಲಗಳನ್ನು ಒದಗಿಸಿದೆ. ಆದರೆ, ಕೆಲವು ಯೋಜನೆಗಳನ್ನು ಪಡೆಯಬೇಕಾದರೆ ಸರಕಾರದ ನಿಯಮ ಪಾಲನೆ ಮಾಡುವದು ನಮ್ಮ ಕರ್ತವ್ಯವಾಗಿದೆ ಎಂದರು.

ಸAಘದ ಬೆಳವಣಿಗೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದ ಅವರು ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಮರಣ ನಿಧಿ ಹಣವನ್ನು ಪಾವತಿಸಿ ಸಹಕರಿಸಬೇಕು ಎಂದು ಕೋರಿದರು. ಸಂಘದಲ್ಲಿ ೧೭೫೪ ಸದಸ್ಯರಿದ್ದಾರೆ. ಎಲ್ಲಾ ಸದಸ್ಯರ ಸಹಕಾರದಿಂದ ಸಂಘವು `ಎ’ ಶ್ರೇಣಿಗೆ ಬಡ್ತಿ ಹೊಂದಿದೆ ಎಂದರು. ೨೦೨೧-೨೨ನೇ ಸಾಲಿನಲ್ಲಿ ಸಂಘ ರೂ. ೨೧.೭೬ ಲಕ್ಷ ನಿವ್ವಳ ಲಾಭಗಳಿಸಿದೆ. ಸಂಘವು ೮೪ ಲಕ್ಷ ರೂ. ಪಾಲು ಬಂಡವಾಳ ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ೪.೭೦ ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ಶೇ. ೧೧ ಡಿವಿಡೆಂಡ್ ನೀಡಲು ನಿರ್ಧರಿಸ ಲಾಗಿದೆ. ಉಳಿದಂತೆ ರೂ. ೬,೨೬,೨೮,೭೫೦ ಕೆಸಿಸಿ ಸಾಲ, ರೂ. ೧೦,೦೦,೦೦೦ ಸ್ವ-ಸಹಾಯ ಗುಂಪುಗಳಿಗೆ ಸಾಲ, ರೂ. ೨೩,೧೭,೨೪೫ ಗೊಬ್ಬರ ಸಾಲ, ರೂ. ೭೪,೦೦,೦೦೦ ಜಾಮೀನು ಸಾಲ, ರೂ. ೫,೩೦,೦೦೦ ನಿರಖು ಠೇವಣಿ ಸಾಲ, ೧,೪೦,೭೦೫ ರೂ.ಗಳನ್ನು ಭವಿಷ್ಯ ನಿಧಿ ಸಾಲ ರೂಪದಲ್ಲಿ ನೀಡಲಾಗಿದೆ ಎಂದು ತಿಳಿಸಿದರು. ಸರಕಾರದಿಂದ ರೂ. ೮೭ ಲಕ್ಷ ಅನುದಾನ ಪಡೆದಿದ್ದು, ಇದರಲ್ಲಿ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಅಳವಡಿಕೆ, ತಡೆಗೋಡೆ, ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಾದ ಚಂಡೀರ ಜಗದೀಶ್, ಅಂಜಪರವAಡ ಕುಶಾಲಪ್ಪ, ಚೋಮುಣಿ, ಬಾಚಮಂಡ ರಾಜಾ ಪೂವಣ್ಣ, ಕಲಿಯಂಡ ಸಂಪನ್ ಅಯ್ಯಪ್ಪ, ಕಲಿಯಂಡ ಸುನಂದ, ಬೊಳಿಯಾಡಿರ ಸಂತು ಸುಬ್ರಮಣಿ ಮತ್ತಿತರರು ಸಂಘದ ಅಭಿವೃದ್ಧಿಯ ಬಗ್ಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ, ನಿರ್ದೇಶಕರಾದ ಅಲ್ಲಾರಂಡ ಸನ್ನು ಅಯ್ಯಪ್ಪ, ಕಲ್ಯಾಟಂಡ ಯತೀಶ್ ಬೋಪಣ್ಣ, ನಿಡುಮಂಡ ಹರೀಶ್ ಪೂವಯ್ಯ, ಕೋಡಿಮಣಿಯಂಡ ಬಿಜು ನಾಣಯ್ಯ, ನಂಬಡಮAಡ ಬಿ. ಸುನಿತಾ, ಪರದಂಡ ಪಿ.ಪ್ರಮಿಳಾ, ಎ.ಎನ್.ಲಕ್ಷö್ಮಣ, ಕೋಲೆಯಂಡ ಎ. ಅಶೋಕ, ಪಾಲೆ ಟಿ.ಕಾರ್ಯಪ್ಪ, ಕುಡಿಯರ ಕೆ.ಗಿರೀಶ್, ಜಿಲ್ಲಾ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಕೆ.ಎ. ಉದಯ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.