ವೀರಾಜಪೇಟೆ, ಸೆ. ೨೨: ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಆರೋಪದಡಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವೀರಾಜಪೇಟೆ ನಗರದ ತಿಮ್ಮಯ್ಯ ಬಡಾವಣೆಯ ನಿವಾಸಿ ಸುನೀಲ್ ಜೋಸೆಫ್ (೪೬) ಬಂಧಿತ ಆರೋಪಿ.

ಬಾಡಿಗೆಗೆಂದು ತೆರಳಿದ ಅಟೋ ಚಾಲಕ ಹಿಂದಿರುಗುವ ಸಂದರ್ಭ ವಿದ್ಯಾರ್ಥಿನಿ ಆಟೋಕ್ಕೆ ಕೈ ತೋರಿಸಿ ನಿಲ್ಲಿಸಿದ್ದು, ಚಾಲಕ ವಿಳಾಸ ಕೇಳಿದ್ದಾನೆ. ಕ್ರಮಿಸಿದ ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿನಿಯೊಂದಿಗೆ ಚಾಲಕ ಅಸಭ್ಯವಾಗಿ ಮಾತನಾಡಿ, ಅನುಚಿತ ವರ್ತನೆ ತೋರಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳುವ ಸಂದರ್ಭ ವಿದ್ಯಾರ್ಥಿನಿ ಬಿದ್ದು ಗಾಯಗೊಂಡಿದ್ದಾಳೆ.

ನAತರ ಸ್ಥಳದಿಂದ ಆಟೋ ಚಾಲಕ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ವಿದ್ಯಾರ್ಥಿನಿಯು ಪೋಷಕರಿಗೆ ದೂರವಾಣಿ ಕರೆ ಮಾಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೋಷಕರು ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಅನ್ವಯ ಪೊಲೀಸರು ಸುನೀಲ್‌ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಆಟೋ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಕಿಶೋರ್‌ಕುಮಾರ್ ಶೆಟ್ಟಿ