ಮಡಿಕೇರಿ, ಸೆ. ೨೩: ಭಾಗಮಂಡಲ, ಅಯ್ಯಂಗೇರಿ, ಕುಂದಚೇರಿ ಮತ್ತು ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಬಾರಿ ವಿಪರೀತ ಮಳೆಯಿಂದಾಗಿ ಕಾಫಿ, ಕರಿಮೆಣಸು, ಏಲಕ್ಕಿ, ತೆಂಗು, ಅಡಿಕೆ, ಭತ್ತದ ಕೃಷಿಗಳು ಕೊಳೆರೋಗಕ್ಕೆ ತುತ್ತಾಗಿ ಶೇಕಡ ಸುಮಾರು ೭೫ ಭಾಗದಷ್ಟು ಕೃಷಿ ನಾಶವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಸೂಕ್ತ ಪರಿಶೀಲನೆ ನಡೆಸಿ ನಷ್ಟ ಸಂಭವಿಸಿದ ಬೆಳೆಗಾರರಿಗೆ ಪರಿಹಾರ ಒದಗಿಸಿ ಕೊಡಬೇಕಾಗಿ ಭಾಗಮಂಡಲ ವ್ಯಾಪ್ತಿಯ ಬೆಳೆಗಾರರು ಒತ್ತಾಯಿಸಿ ದರು. ಇಂದು ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳೆಗಾರರಾದ ಕೆ.ಜೆ ಭರತ್ ಭಾಗಮಂಡಲ, ಪಾಣತ್ತಲೆ ವಿಶ್ವನಾಥ್ ಕುಂದಚೇರಿ, ಕೀರ್ತಿ ಕುಮಾರ್ ಕುಂದಚೇರಿ, ಕೆದಂಬಾಡಿ ಸಾಧು ಕುಂದಚೇರಿ, ಅಮೆ ಗಂಗಾಧರ ಪದಕಲ್ಲು, ಕುಯ್ಯಮುಡಿ ಮನೋಜ್ ಕುಮಾರ್ ಅಯ್ಯಂಗೇರಿ ಅವರುಗಳು ಬೆಳೆಗಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿದರು. ಭಾಗಮಂಡಲ
(ಮೊದಲ ಪುಟದಿಂದ) ವ್ಯಾಪ್ತಿಯಲ್ಲಿ ಕಳೆದ ವರ್ಷ ಜನವರಿಯಿಂದ ಸೆಪ್ಟೆಂಬರ್ ೨೨ ರವರೆಗೆ ೧೯೩ ಇಂಚು ಮಳೆಯಾಗಿದ್ದು, ಈ ಬಾರಿ ಇದೇ ಅವಧಿಯಲ್ಲಿ ೨೪೭.೫ ಇಂಚು ಮಳೆಯಾಗಿದೆ. ೫೪.೫ ಇಂಚು ಹೆಚ್ಚು ಮಳೆಯ ಪರಿಣಾಮದಿಂದಾಗಿ ೨೦೧೮ ರಲ್ಲಿ ಸಂಭವಿಸಿದ ನಷ್ಟಕ್ಕಿಂತಲೂ ತೀವ್ರವಾಗಿದೆ. ಕುಂದಚೇರಿ ಗಾಮದಲ್ಲಿ ೨೦೧೮ ರಲ್ಲಿ ೨೨೬ ಇಂಚು ಮಳೆ ಬಿದ್ದಿದೆ. ೨೦೧೯ ರಲ್ಲಿ ೧೮೩ ಇಂಚು, ೨೦೨೦ ರಲ್ಲಿ ೧೯೨ ಇಂಚು, ೨೦೨೧ ರಲ್ಲಿ ೧೮೨ ಇಂಚು ಹಾಗೂ ೨೦೨೨ ರಲ್ಲಿ ಜನವರಿಯಿಂದ ಇದುವರೆಗೆ ೨೧೪ ಇಂಚು ಮಳೆ ಬಿದ್ದಿದ್ದು, ಇನ್ನು ೩ ತಿಂಗಳಲ್ಲಿ ಇನ್ನಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಬೆಳೆಗಾರರು ತೀವ್ರ ಸ್ವರೂಪದ ಆರ್ಥಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಗೋಷ್ಠಿಯಲ್ಲಿ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡರು.
ಇತ್ತೀಚಿನ ದಿನಗಳಲ್ಲಿ ಕೃಷಿ, ಬೆಳೆಗಳಿಗೆ ಅವಶ್ಯವಿರುವ ಕ್ರಿಮಿನಾಶಕ, ಗೊಬ್ಬರ ದರ ಕೂಡ ಏರಿಕೆಯಾಗುತ್ತಿದೆ. ಏಲಕ್ಕಿ ಕುಯ್ಲು ಮಾಡಿದ ಬಳಿಕ ಒಣಗಿಸಲು ಯಂತ್ರ ಬಳಕೆಗೆ ಅತೀ ಹೆಚ್ಚು ದರ ನೀಡಬೇಕಾಗಿದೆ. ಇವುಗಳೆಲ್ಲದರ ಮಧ್ಯೆ ಆನೆ, ಕಡವೆ, ಹಂದಿ ಇತ್ಯಾದಿ ವನ್ಯಪ್ರಾಣಿಗಳಿಂದ ಬೆಳೆಗಳಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ರೈತರು ಆರ್ಥಿಕವಾಗಿ ಕುಗ್ಗಿದ್ದಾರೆ.
ಬೆಳೆ ನಷ್ಟ ಸಂಬAಧಿಸಿದAತೆ ಸೂಕ್ತ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ, ಶಾಸಕರು ಸೇರಿದಂತೆ ಉಸ್ತುವಾರಿ ಸಚಿವರುಗಳಿಗೆ ಮನವಿ ಮಾಡಲಾಗಿದ್ದು, ಶೀಘ್ರ ಪರಿಹಾರ ವಿತರಣೆಗೆ ಗೋಷ್ಠಿಯಲ್ಲಿದ್ದ ಬೆಳೆಗಾರರು ಒತ್ತಾಯಿಸಿದರು.