ಮಡಿಕೇರಿ, ಸೆ. ೨೩: ಸವಾಲು ಹಾಗೂ ಸಂಕಷ್ಟದ ನಡುವೆ ದಿನನಿತ್ಯ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಕಲ್ಪಿಸುವುದು ಸರಕಾರ ಹಾಗೂ ಜಿಲ್ಲಾಡಳಿತ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಭರವಸೆ ನೀಡಿದರು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಗರಸಭೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಅರ್ಹ ಫಲಾನುಭವಿ ಪೌರಕಾರ್ಮಿಕರಿಗೆ ಮೊದಲ ಹಂತದಲ್ಲಿ ಜಿಲ್ಲೆಯ ವಿವಿಧೆಡೆ ಮನೆ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಅರ್ಹ ಪೌರಕಾರ್ಮಿಕರಿಗೆ ವಸತಿ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಮನೆಯ ಕೆಲಸ ಮಾಡಲು ಕಷ್ಟಪಡುವ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರು ಇಡೀ ನಗರವನ್ನು ಸ್ವಚ್ಛಗೊಳಿಸುವ ಮೂಲಕ ತಮಗೆ ಗೊತ್ತಿಲ್ಲದಂತೆ ಮಹತ್ತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳು ರಜೆ ಹಾಕಿದರೆ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಅದುವೆ ಪೌರಕಾರ್ಮಿಕರು ಸಾಮೂಹಿಕವಾಗಿ ಗೈರಾದರೆ ಅಂದು ನಗರ ವ್ಯತಿರಿಕ್ತ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಪೌರಕಾರ್ಮಿಕರಿಗೆ ಪರ್ಯಾಯ ಕೆಲಸಗಾರರಿಲ್ಲ.

(ಮೊದಲ ಪುಟದಿಂದ) ಕೋವಿಡ್ ಪರಿಸ್ಥಿತಿಯಲ್ಲಿಯೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿಂಗಡಣೆ ಮಾಡದ ಕಸವನ್ನು ಪಡೆಯದಿರಿ

ಕೆಲಸ ಮಾಡುವ ಸಂದರ್ಭ ಸುರಕ್ಷಾ ಕವಚಗಳನ್ನು ಧರಿಸಬೇಕು. ಕಸ ಸಂಗ್ರಹಣೆ ಸಮಯದಲ್ಲಿ ವಿಂಗಡಣೆ ಮಾಡಿ ನೀಡಿದ ಕಸವನ್ನು ಮಾತ್ರ ಪಡೆಯಿರಿ. ವಿಂಗಡಿಸದ ಕಸವನ್ನು ನೀಡಿದ್ದಲ್ಲಿ ಅದನ್ನು ನಿರಾಕರಿಸಿ ಇದರಿಂದ ಕಸ ಸಮಸ್ಯೆಗೆ ಕೊಂಚ ನಿಯಂತ್ರಣ ಬೀಳುತ್ತದೆ. ಕಸದಿಂದ ಉತ್ಪಾದಿಸುವ ಗೊಬ್ಬರ ಮಾರಾಟ ಮಾಡಿ ಅದರ ಆದಾಯವನ್ನು ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳು ವಂತಾಗಬೇಕು. ಪೌರಕಾರ್ಮಿಕರಿಗೆ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಕರೆದೊಯ್ದು ತರಬೇತಿ ನೀಡುವಂತೆ ಸಲಹೆ ನೀಡಿದ ಅವರು, ಪೌರಕಾರ್ಮಿಕರ ಕೆಲಸ ಖಾಯಮಾತಿಗೆ ಸರಕಾರ ಮುಂದಾಗಿದ್ದು, ಲಿಖಿತ ಆದೇಶದ ಬಳಿಕ ಜಿಲ್ಲೆಯಲ್ಲಿಯೂ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಗರಸಭಾ ಪೌರಾಯುಕ್ತ ವಿಜಯ ಮಾತನಾಡಿ, ಪೌರಾಯುಕ್ತರ ಸೇವೆಯನ್ನು ಸರಕಾರ ಪರಿಗಣಿಸಿ ಅವರಿಗಾಗಿ ದಿನವನ್ನು ಆಚರಣೆ ಮಾಡುತ್ತಿದೆ. ನೀವುಗಳು ಕೇವಲ ಕೆಲಸಗಾರರಲ್ಲ ‘ಸ್ವಚ್ಛತಾ ಸೇನಾನಿಗಳು’ ಎಂದು ಬಣ್ಣಿಸಿದ ಅವರು, ಈ ಮೊದಲು ಪೌರಕಾರ್ಮಿಕರಿಗೆ ಸೂಕ್ತ ಸ್ಥಾನಮಾನ ದೊರೆತಿರಲಿಲ್ಲ. ಇಂದು ವೇತನದೊಂದಿಗೆ ಪೌರಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗೆ ಸರಕಾರ ಹತ್ತುಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವರ್ಷದಲ್ಲಿ ೨ ಬಾರಿ ಉನ್ನತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸಂಕಷ್ಟ ಭತ್ಯೆ ಒದಗಿಸಲಾಗುತ್ತಿದೆ. ಹೊರಗುತ್ತಿಗೆಯಲ್ಲಿರುವ ಕಾರ್ಮಿಕರಿಗೆ ಜೀವವಿಮೆ ಮೂಲಕ ಅವರ ಕುಟುಂಬಕ್ಕೆ ನೆರವು ನೀಡಲಾಗುತ್ತಿದೆ. ೨೧ ವಿಶೇಷ ರಜೆ ಭತ್ಯೆಯನ್ನು ಘೋಷಣೆ ಮಾಡಲಾಗಿದೆ ಎಂದು ವಿವರಿಸಿದರು.

ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಪೌರಕಾರ್ಮಿಕರಿಗೆ ತಮ್ಮದೇ ಆದ ಬದ್ಧತೆ ಇದೆ. ಮದ್ಯಕ್ಕೆ ದಾಸರಾಗದೆ ಆರೋಗ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಿಸಬೇಕು ಎಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪೌರಕಾರ್ಮಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುತ್ತಿದ್ದೇವೆ. ಸರಕಾರದ ಯೋಜನೆಗಳನ್ನು ತಲುಪಿಸಲಾಗುತ್ತಿದೆ. ಕಾರ್ಮಿಕರ ಬೇಡಿಕೆಗಳಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರಸಭೆಯಲ್ಲಿ ಉತ್ತಮ ಪೌರಕಾರ್ಮಿಕರಿಗೆ ದುಡಿಯುತ್ತಿರುವ ಮಂಜುಳಾ, ಲಕ್ಷಿö್ಮ ಹಾಗೂ ಶಿವ ಅವರುಗಳನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಖಾಯಂ ಪೌರಕಾರ್ಮಿಕರಿಗೆ ರೂ. ೭ ಸಾವಿರ ವಿಶೇಷ ಭತ್ಯೆಯನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಸ್ಪರ್ಧಾ ವಿಜೇತರು

ಪೌರಕಾರ್ಮಿಕರ ದಿನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭ ಗಣ್ಯರು ಬಹುಮಾನ ವಿತರಿಸಿದರು.

ಮಹಿಳೆಯರ ವಿಭಾಗದ ರಂಗೋಲಿ ಸ್ಪರ್ಧೆಯಲ್ಲಿ ಮಣಿ (ಪ್ರ), ಮೀನಾಕ್ಷಿ (ದ್ವಿ), ಜಮುನಾ (ತೃ), ಸಂಗೀತ ಕುರ್ಚಿಯಲ್ಲಿ ಅಚಿಜನಾ (ಪ್ರ), ಮೀನಾಕ್ಷಿ (ದ್ವಿ), ಭಾಗ್ಯ (ತೃ), ಒಂಟಿ ಕಾಲಿನ ಓಟ ಸ್ಪರ್ಧೆಯಲ್ಲಿ ಭಾಗ್ಯ (ಪ್ರ), ಅಂಜನಾ (ದ್ವಿ), ಹಗ್ಗಜಗ್ಗಾಟದಲ್ಲಿ ಕೊಡಗಿನ ಕಾವೇರಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.

ಪುರುಷರ ವಿಭಾಗದ ಸಂಗೀತ ಕುರ್ಚಿಯಲ್ಲಿ ನಾಗರಾಜ್ (ಪ್ರ), ಮನೋಹರ್ (ದ್ವಿ), ಮುರುಗಾ (ತೃ), ಗೋಣಿಚೀಲ ಓಟದಲ್ಲಿ ಶಿವ (ಪ್ರ), ಲೋಕೇಶ್ (ದ್ವಿ), ೨೦೦ ಮೀ ಓಟದಲ್ಲಿ ಮನೋಹರ್ (ಪ್ರ), ನಾಗರಾಜ್ (ದ್ವಿ), ಕೃಷ್ಣ (ತೃ), ಹಗ್ಗಜಗ್ಗಾಟದಲ್ಲಿ ಟಗರು ತಂಡ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರುಗಳಾದ ಕೆ.ಎಸ್. ರಮೇಶ್, ಚಂದ್ರು, ಎಸ್.ಸಿ. ಸತೀಶ್, ಮಂಜುಳಾ, ಕಲಾವತಿ, ಶ್ವೇತಾ, ಸಬಿತಾ, ಉಷಾ, ಕಣ್ಣಿನ ತಜ್ಞ ಡಾ. ದ್ಯಾನ್ ಚಿಣ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು. ತಾಹಿರ್ ಸ್ವಾಗತಿಸಿ, ಸೌಮ್ಯ ನಿರೂಪಿಸಿ, ಸುಜಾತ ವಂದಿಸಿದರು.