ವೀರಾಜಪೇಟೆ, ಸೆ. ೨೩: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಕೋಟುಪರಂಬು ಮೈತಾಡಿ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ಗ್ರಾಮದ ನಿವಾಸಿ ಕುಂಞ್ರ ಸಿ. ಕಾವೇರಿಯಪ್ಪ ಎಂಬವರ ಪುತ್ರ ಶರತ್ ಪೂವಪ್ಪ (೩೩) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೃತ ಶರತ್ ಶಾರದಾ ದೇವಿ ಎಂಬವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಖಾಸಗಿ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದ ಇವರಿಗೆ ನಂತರದಲ್ಲಿ ಮಕ್ಕಳಾಗಲಿಲ್ಲ ಎಂಬ ಚಿಂತೆ ಮನಸ್ಸಿನಲ್ಲಿ ಕಾಡಿತ್ತು ಎನ್ನಲಾಗಿದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಶರತ್ ಕೆಲವು ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ನಂತರದಲ್ಲಿ ತನ್ನ ಸ್ವಗೃಹವಾದ ಮೈತಾಡಿಗೆ ಬಂದಿದ್ದರು. ತಾ.೨೨ರಂದು ಬೆಳಿಗ್ಗೆ ಮನೆಯಲ್ಲಿ ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದ ಕೀಲಿಯನ್ನು ನೀಡಿ ಎಂದು ಕೇಳಿದ್ದಾರೆ. ತಾಯಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮಾತಿನಿಂದ ಬೇಸರಗೊಂಡ ಶರತ್ ಮನೆಯಲ್ಲಿದ್ದ ಎರಡು ನಳಿಕೆ ಕೋವಿಯನ್ನು ಹೊತ್ತು ಹೊರ ನಡೆದಿದ್ದಾನೆ. ಸಂಜೆ ವೇಳೆಗಾದರೂ ಮಗ ಮನೆಗೆ ಸೇರಲಿಲ್ಲ. ಮೃತರ ತಂದೆ ಮತ್ತು ಇತರರು ಗ್ರಾಮದ ಎಲ್ಲೆಡೆಗಳಲ್ಲಿ ಶೋಧ ನಡೆಸಿದ್ದಾರೆ. ದೊರಕದಿದ್ದಾಗ, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ತಂದೆ ಕಾವೇರಿಯಪ್ಪ ಅವರು ಮಗ ಕಾಣೆಯಾಗಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಇಂದು ಮಧ್ಯಾಹ್ನ ೨.೩೦ ರ ಸಮಯದಲ್ಲಿ ಮೈತಾಡಿ ಗ್ರಾಮದ ಕುಂಞ್ರ ಪೂವಣ್ಣ ಎಂಬವರ ಕಾಫಿ ತೋಟದಲ್ಲಿ ಶರತ್ನ ಮೃತದೇಹ ಪತ್ತೆಯಾಗಿದೆ. ತಂದೆ ಕಾವೇರಿಯಪ್ಪ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕಿಶೋರ್ ಕುಮಾರ್ ಶೆಟ್ಟಿ