ಮಡಿಕೇರಿ, ಸೆ. ೨೨ : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬAಧ ನಗರದ ಹೊರವಲಯದ ಎರಡನೇ ಮೊಣ್ಣಂಗೇರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಘನತ್ಯಾಜ್ಯ ಘಟಕ ಸ್ಥಾಪನೆ ಅನಿವಾರ್ಯವಾಗಿದೆ. ಈ ಸಂಬAಧ ಇಂದು ಸಾರ್ವಜನಿಕರಿಂದ ವ್ಯಕ್ತವಾಗಿರುವ ಸಲಹೆ ಸೂಚನೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಿದ್ದು, ಸದ್ಯ ಪ್ರಕರಣವನ್ನು ರಾಜ್ಯ ಉಚ್ಚ ನ್ಯಾಯಾಲಯ ಗಮನಿಸುತ್ತಿರುವದರಿಂದ ಮಾಲಿನ್ಯ ಮಂಡಳಿ ಹಾಗೂ ನ್ಯಾಯಾಲಯದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.

ಮಡಿಕೇರಿ ನಗರದಲ್ಲಿ ಸಂಗ್ರಹಿಸಲಾಗುತ್ತಿರುವ ಕಸ ತ್ಯಾಜ್ಯಗಳನ್ನು ಕರ್ಣಂಗೇರಿ ವ್ಯಾಪ್ತಿಯ ಸ್ಟೋನ್ ಹಿಲ್ ಬಳಿ ಅವೈಜ್ಞಾನಿಕವಾಗಿ ಸಂಗ್ರಹಿಸುತ್ತಿರುವದರಿAದ ಕಸ ತ್ಯಾಜ್ಯಗಳು ಕೊಳೆತು ನಗರದ ಜನತೆಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸನಿಹದ ಸುಬ್ರಮಣ್ಯನಗರ, ರೈಫಲ್ ರೇಂಜ್, ವಿದ್ಯಾನಗರ ನಿವಾಸಿಗಳು ಸೇರಿಕೊಂಡು ಎಸ್‌ಆರ್‌ವಿಕೆ ಎಂಬ ಅಸೋಸಿಯೇಶನ್ ರಚಿಸಿಕೊಂಡು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ನಗರಸಭೆ, ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟೀಸ್ ಜಾರಿ ಮಾಡಿದ್ದಲ್ಲದೆ, ಎಸ್‌ಆರ್‌ವಿಕೆಯ ಸಹಕಾರದೊಂದಿಗೆ ಪರ್ಯಾಯ ಜಾಗ ಗುರುತಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರವಲಯದ ಎರಡನೇ ಮೊಣ್ನಂಗೇರಿಯ ಸ.ನಂ.೨೦/೧ರಲ್ಲಿನ ಹತ್ತು ಎಕರೆ ಪ್ರದೇಶವನ್ನು ಗುರುತಿಸಿತ್ತು.

(ಮೊದಲ ಪುಟದಿಂದ) ಮಾಲಿನ್ಯ ನಿಯಂತ್ರಣ ಮಂಡಳಿಯವರು ಸ್ಥಳ ಪರಿಶೀಲನೆ ಮಾಡಿ ಸೂಕ್ತವಾದ ಜಾಗವೆಂದು ವರದಿ ನೀಡಿತ್ತು. ಹಾಗಾಗಿ ನಗರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ಅಭಿಪ್ರಾಯ ಪಡೆಯುವ ಸಲುವಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ ವತಿಯಿಂದ ಇಂದು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಭೆ ಏರ್ಪಡಿಸಲಾಗಿತ್ತು.

ಪರ-ವಿರೋಧ

ಇಂದಿನ ಸಭೆಯಲ್ಲಿ ಮಡಿಕೇರಿ ನಗರಸಭಾ ಪ್ರತಿನಿಧಿಗಳು, ನಗರದ ನಿವಾಸಿಗಳು, ಮೊಣ್ಣಂಗೇರಿ, ಗಾಳಿಬೀಡು ಗ್ರಾಮಸ್ಥರು ಪಾಲ್ಗೊಂಡಿದ್ದರು. ನಗರ ಸಭೆಯವರು, ನಗರದ ನಿವಾಸಿಗಳು ಯೋಜನೆಯ ಪರವಾಗಿ ಮಾತನಾಡಿದರೆ, ಗ್ರಾಮಸ್ಥರು ಸಹಜವಾಗಿಯೇ ಕೆಲವೊಂದು ಕಾರಣಗಳನ್ನು ಮುಂದಿಟ್ಟುಕೊAಡು ವಿರೋಧ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆಗೆ ಒತ್ತು

ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ನಗರದಲ್ಲಿ ೨೫ ಟಿಪಿಡಿಯಷ್ಟು ಕಸ ಸಂಗ್ರಹವಾಗುತ್ತಿದ್ದು, ವಿಂಗಡಣೆ ಮಾಡಿ ಕರ್ಣಂಗೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೊಬ್ಬರ ತಯಾರು ಮಾಡಲಾಗುತ್ತಿದೆ. ಮುಂದಿನ ೨೦ ವರ್ಷಗಳ ಜನಸಂಖ್ಯೆ ಆಧಾರದ ಮೇಲೆ ೬೫ ಟಿಪಿಡಿರಷ್ಟರ ಮಟ್ಟಿಗೆ ಅಂದಾಜಿಸಿ ವೈಜ್ಞಾನಿಕವಾಗಿ ಸಂಸ್ಕರಣೆ ಮತ್ತು ವಿಲೇವಾರಿ ಘಟಕವನ್ನು ಎರಡನೇ ಮೊಣ್ಣಂಗೇರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಜನರಿಗೆ ಯಾವದೇ ತೊಂದರೆ ಆಗದಂತೆ ನಿರ್ಮಾಣ ಮಾಡಲಾಗುವದು ಪರಿಸರಕ್ಕೆ ಒತ್ತು ನೀಡುವದರೊಂದಿಗೆ ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುವದು. ಜನರು ಕೂಡ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಗುಣಮಟ್ಟದಲ್ಲಿ ಮಾಡುತ್ತೇವೆ

ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ; ಪ್ರಸ್ತುತ ಕಸ ಸಂಗ್ರಹ ಅವೈಜ್ಞಾನಿಕವಾಗಿ ಆಗುತ್ತಿದೆ. ಈಗಿನ ಪರಿಸ್ಥಿತಿ ಬಗ್ಗೆ ಅರಿತುಕೊಳ್ಳಬೇಕಿದೆ, ನ್ಯಾಯಾಲಯದ ಆದೇಶÀದಂತೆ ಹತ್ತು ಎಕರೆ ಗುರುತು ಮಾಡಲಾಗಿದ್ದು, ಯಾವದೇ ತೊಂದರೆ ಆಗದಂತೆ ವೈಜ್ಞಾನಿಕವಾಗಿ ಮಾಡುತ್ತೇವೆ. ಜನರಿಗೂ ಯಾವದೇ ತೊಂದರೆ ಆಗುವದಿಲ್ಲ, ಗುಣಮಟ್ಟದಲ್ಲಿ ಘಟಕ ಸ್ಥಾಪನೆ ಮಾಡುತ್ತೇವೆ. ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.

ಬೇರೆ ಬೇರೆ ಕಡೆ ಮಾಡಿ

ಎಸ್‌ಆರ್‌ವಿಕೆ ಉಪಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ಘನತ್ಯಾಜ್ಯ ಘಟಕದ ಯೋಜನೆ ಚೆನ್ನಾಗಿದೆ, ಮುಂದಿನ ೨೦ ವರ್ಷಗಳ ಮುಂಜಾಗ್ರತೆಯಿರುವ ಯೋಜನೆಯನ್ನು ಒಂದೇ ಕಡೆಯಲ್ಲಿ ಮಾಡುವ ಬದಲಿಗೆ ನಗರದ ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವದರಿಂದ ಒತ್ತಡ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಜಲ ಮೂಲಗಳಿವೆ

ಸ್ಥಳೀಯ ನಿವಾಸಿ ಯಾಲದಾಳು ದಯಾನಂದ ಮಾತನಾಡಿ; ತಾನು ಘಟಕ ನಿರ್ಮಾಣವಾಗಲಿರುವ ಜಾಗದ ಸಮೀಪದಲ್ಲೇ ವಾಸವಿದ್ದು, ಈಗ ಗುರುತಿಸಲಾಗಿರುವ ಜಾಗದಲ್ಲಿ ಜಲಮೂಲಗಳಿವೆ. ಘಟಕ ನಿರ್ಮಾಣವಾದರೆ ಕಲುಷಿತ ನೀರು ಹರಿದು ಬಂದು ಜಲಮೂಲಗಳಿಗೆ ಸೇರಲಿದ್ದು ಅದನ್ನೇ ಕುಡಿಯಬೇಕಾಗುತ್ತದೆ. ಈ ಜಾಗ ಕಾಡು ಪ್ರಾಣಿಗಳ ವಾಸಸ್ಥಾನವಾಗಿದ್ದು, ಪರಿಸರಕ್ಕೂ ಹಾನಿಯಾಗಲಿದೆ. ಅಲ್ಲದೆ, ಜಾಗಕ್ಕೆ ತೆರಳುವ ರಸ್ತೆ ಎರಡು ಬಾರಿ ಕುಸಿದಿದ್ದು, ವಾಹನ ಸಂಚಾರ ಕೂಡ ಅಸಾಧ್ಯವಾಗಲಿದೆ. ಕಸದಿಂದಾಗಿ ವಾಸನೆ, ಸೊಳ್ಳೆ ಬರಲಿದ್ದು, ನಾವುಗಳು ಬದುಕುವದು ಬೇಡವೇ ಎಂದು ಪ್ರಶ್ನಿಸಿದರಲ್ಲದೆ, ಬೇರೆ ಸ್ಥಳ ಆಯ್ಕೆ ಮಾಡುವದು ಉತ್ತಮವೆಂದು ಹೇಳಿದರು.

ಚಿರತೆಗಳು ಬರುತ್ತವೆ

ಇದೀಗ ಕಸ ಹಾಕುತ್ತಿರುವ ಸ್ಥಳದಲ್ಲಿ ನಾಯಿಗಳ ಹಾವಳಿ ಇದೆ. ನಮ್ಮ ಜಾಗದ ಬಳಿ ಕಸ ಹಾಕಿದರೆ ನಾಯಿಗಳು ಬರಲಿದ್ದು, ಅರಣ್ಯ ಪ್ರದೇಶವಾಗಿರುವದರಿಂದ ಚಿರತೆಗಳ ಹಾವಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಅಲ್ಲದೆ ಜಾಗದ ಸರ್ವೆ ಸಂದರ್ಭ ಸ್ಥಳೀಯರು ಯಾರೂ ಕೂಡ ಹಾಜರಿರಲಿಲ್ಲ, ಸಹಿ ಕೂಡ ಮಾಡಿಲ್ಲ. ಸುಬ್ರಮಣ್ಯ ನಗರದವರು ಮಾಡಿದ್ದಾರೆ. ಯೋಜನೆಯಲ್ಲಿ ಅದರ ನಿರ್ವಹಣೆ ಹೇಗೆ ಎಂಬದನ್ನು ತೋರಿಸಿಲ್ಲ, ರಸ್ತೆ ಬಗ್ಗೆಯೂ ಮಾಹಿತಿ ಇಲ್ಲ; ಈ ಜಾಗ ಸೂಕ್ತವಲ್ಲ, ಕರ್ಣಂಗೇರಿಯಲ್ಲಿ ಸಾಕಷ್ಟು ಜಾಗ ಲಭ್ಯವಿದೆ. ಅಲ್ಲಿ ಮಾಡಲು ಆಸಕ್ತಿ ಯಾಕಿಲ್ಲ ಎಂದು ಪ್ರಶ್ನಿಸಿದರು.

ಜನನಿಬಿಡ ಪ್ರದೇಶವಾಗಬೇಕು

ಸುಬ್ರಮಣ್ಯ ನಗರದವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಆ ನಗರದಲ್ಲಿರುವ ನಾವುಗಳು ಪ್ರತಿನಿತ್ಯ ಸೂರ್ಯನಮಸ್ಕಾರ ಮಾಡಲು ನಿಂತರೆ ನಮಗೆ ಕಾಣುವದು ಕಸದ ರಾಶಿ, ೩೬೫ ದಿನಗಳೂ ಕೂಡ ಮಕ್ಕಳಲ್ಲಿ ಅನಾರೋಗ್ಯ, ವರ್ಷವಿಡೀ ನೊಣಗಳ ಕಾಟ, ಹಾಗಾಗಿ ಜನನಿಬಿಡ ಪ್ರದೇಶದಲ್ಲಿ ಘಟಕ ಸ್ಥ್ತಾಪನೆ ಮಾಡಬೇಕು ಎಂದು ಸಲಹೆ ಮಾಡಿದರು.

ರಸ್ತೆ ಮಾಡಬಹುದು

ನಗರಸಭಾ ಸದಸ್ಯ ಮಹೇಶ್ ಜೈನಿ ಮಾತನಾಡಿ; ಜನತೆಯ ಹಿತದೃಷ್ಟಿಯಿಂದ ಇದೊಂದು ಉತ್ತಮ ಯೋಜನೆಯಾಗಿದೆ. ಮುಂದಿನ ೨೦ ವರ್ಷಗಳ ಮುಂದಾಲೋಚನೆಯ ಕೈಪಿಡಿಯಾಗಿದ್ದು, ವೈಜ್ಞಾನಿಕವಾಗಿ ಮಾಡಲಾಗುತ್ತದೆ. ಇದೀಗ ಕಸದ ರಾಶಿಯಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತಿದೆ, ಹೊಸ ಜಾಗಕ್ಕೆ ತೆರಳುವ ರಸ್ತೆ ಬದಿ ಕುಸಿದಿದೆ. ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಅರಣ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರಸ್ತೆ ಅಗಲೀಕರಣ ಮಾಡಬಹುದು. ಯಾವದೇ ಸಮಸ್ಯೆ ಇರುವದಿಲ್ಲ. ಈ ಘಟಕದಿಂದ ಜನರಿಗೆ ಯಾವದೇ ತೊಂದರೆ ಆಗುವದಿಲ್ಲ, ಘಟಕ ಸ್ಥಾಪನೆಗೆ ಸಮತಟ್ಟಾದ ಜಾಗ ಆಯ್ಕೆ ಮಾಡಲಾಗಿದೆ ಎಂದು ಅಭಿಪ್ರಾಯಿಸಿದರು.

ಸೂಕ್ತವಾದ ಜಾಗ

ವಕೀಲ ಹುದೇರಿ ನಾಗೇಶ್ ಮಾತನಾಡಿ; ಎಸ್‌ಆರ್‌ವಿಕೆ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಾಗ ಗುರುತಿಸುವ ಜವಾಬ್ದಾರಿಯನ್ನು ಎಸ್‌ಆರ್‌ವಿಕೆಗೆ ನೀಡಲಾಗಿತ್ತು. ಅದರಂತೆ ತಳಮಟ್ಟದಲ್ಲಿರುವ ಸೂಕ್ತವಾದ ಜಾಗ ಗುರುತಿಸಲಾಗಿದೆ, ಎಲ್ಲ ರೀತಿಯಲ್ಲಿಯೂ ಈ ಜಾಗ ಸೂಕ್ತವಾಗಿದೆ. ಯಾವದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಸಮಸ್ಯೆಗಳು ಇದ್ದೇ ಇರುತ್ತವೆ. ಅದನ್ನು ಬಗೆಹರಿಸಿಕೊಳ್ಳುವ ಬಗ್ಗೆ ಯೋಚಿಸಬೇಕಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುತ್ತದೆ, ಅದನ್ನೇ ದೊಡ್ಡದು ಮಾಡಬಾರದೆಂದು ಸಲಹೆ ಮಾಡಿದರು.

ಸೂಕ್ಷö್ಮ ಪರಿಸರ ತಾಣ

ಸ್ಥಳೀಯ ನಿವಾಸಿ ಮಾಚಯ್ಯ ಮಾತನಾಡಿ; ಪ್ರಸ್ತುತ ಗುರುತಿಸಲಾಗಿರುವ ಜಾಗ ಸೂಕ್ಷö್ಮ ಪರಿಸರ ತಾಣ ವ್ಯಾಪ್ತಿಗೆ ಬರುತ್ತದೆ, ಜಾಗ ಗುರುತಿಸಲು ಎಸ್‌ಆರ್‌ವಿಕೆಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋಹನ್ ಅಪ್ಪಾಜಿ ಎಸ್‌ಆರ್‌ವಿಕೆ ತಾನಾಗಿ ಹೋಗಿ ಗುರುತಿಸಿಲ್ಲ, ನ್ಯಾಯಾಲಯದ ನಿರ್ದೇಶನದಂತೆ ಗುರುತಿಸಿದ್ದು, ಮಂಜೂರು ಮಾಡಿಕೊಟ್ಟಿದ್ದು ಜಿಲ್ಲಾಧಿಕಾರಿಗಳು ಎಂದು ತಿರುಗೇಟು ನೀಡಿದರು.

ಯಾವದೇ ತೊಂದರೆ ಇಲ್ಲ

ದೇಚೂರು ನಿವಾಸಿ ಮಂಜುನಾಥ್ ಮಾತನಾಡಿ; ಈಗಿನ ವ್ಯವಸ್ಥೆಗೂ ಹೊಸ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಮಾಡಿದರೆ ಯಾವದೇ ತೊಂದರೆ ಇಲ್ಲ, ಕಸ ಕೊಂಡೊಯ್ಯುವಾಗ ಕಸಗಳು ಹಾರದಂತೆ ಹೊದಿಕೆ ಹಾಸಿಕೊಂಡು ಕೊಂಡೊಯ್ಯಬೇಕಿದೆ. ಅಧಿಕಾರಿಗಳು ಕೂಡ ಆರಂಭದಲ್ಲಿರುವ ಉತ್ಸಾಹದಂತೆ ಕೊನೆಯವರೆಗೂ ಮುಂದುವರೆಸಬೇಕೆAದು ಸಲಹೆ ಮಾಡಿದರು.

ದೊಡ್ಡ ತೊಂದರೆ ಆಗುವುದಿಲ್ಲ

ನಗರ ಸಭಾ ಸದಸ್ಯ ಅಪ್ಪಣ್ಣ ಮಾತನಾಡಿ ಈ ಹಿಂದಿನ ಜನಸಂಖ್ಯೆ ಆಧಾರದಲ್ಲಿ ಕೈಗೊಂಡ ಯೋಜನೆಯಿಂದ ಇದೀಗ ಸಮಸ್ಯೆ ಉಂಟಾಗಿದೆ. ಇದೀಗ ನಗರ ಬೆಳೆಯುತ್ತಿದೆ, ಜನಸಂಖ್ಯೆ ಹೆಚ್ಚಾಗುತ್ತಿದೆ, ಹಾಗಾಗಿ ಜಿಲ್ಲಾಡಳಿತ ಹೊಸ ಜಾಗ ಗುರುತಿಸಿದೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಜಲಮೂಲ ಇರುತ್ತದೆ, ಯಾವದೇ ದೊಡ್ಡ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ತ್ಯಾಜ್ಯ ಘಟಕ ಬೇಕಾಗಿಲ್ಲ

ಕ್ಲೀನ್ ಕೂರ್ಗ್ ಸದಸ್ಯೆ ಅಪರ್ಣ ಮಾತನಾಡಿ ಘನ ತ್ಯಾಜ್ಯ ಘಟಕ ಕೊಡಗು ಜಿಲ್ಲೆಗೆ ಅವಶ್ಯಕತೆಯಿಲ್ಲ. ಆದಷ್ಟು ಪಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಹಸಿ ಕಸವನ್ನು ಮನೆಗಳ ಹಿತ್ತಲಲ್ಲಿ ಲಭ್ಯವಿರುವ ಜಾಗದಲ್ಲಿ ಸಂಗ್ರಹಿಸಿ ಗೊಬ್ಬರ ಮಾಡುವುದರಿಂದ ಕಸ ಸಂಗ್ರಹಣೆಯ ಒತ್ತಡ ಕಡಿಮೆಯಾಗಲಿದೆ. ಪೇಪರ್ ಕಪ್, ಪ್ಲೇಟ್, ಬಲೂನ್ ಮುಂತಾದ ಬಳಕೆಯನ್ನು ಕಡಿಮೆ ಮಾಡಿದಲ್ಲಿ ಕಸದೊತ್ತಡ ಕಡಿಮೆ ಮಾಡಬಹುದೆಂದು ಸಲಹೆ ಮಾಡಿದರು.

ಜಲ ಮೂಲವಿಲ್ಲದ ಜಾಗವಿಲ್ಲ

ಸುಬ್ರಮಣ್ಯ ನಗರದ ನಿವಾಸಿ ನಾಣಯ್ಯ ಮಾತನಾಡಿ; ಎರಡನೇ ಮೊಣ್ಣಂಗೇರಿಯಲ್ಲಿ ೧೩೩ಒ ಎಕರೆ ಪೈಸಾರಿ ಜಾಗವಿದ್ದದು, ಈ ಪೈಕಿ ಜಿಲ್ಲಾಡಳಿ ೧೦ ಎಕರೆ ಮಂಜೂರು ಮಾಡಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಜಾಗ ಪರಿಶೀಲಿಸಿ ಸೂಕ್ತ ಜಾಗವೆಂದು ಒಪ್ಪಿಗೆ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಜಲ ಮೂಲವಿಲ್ಲದ ಜಾಗವೇ ಇಲ್ಲ; ೧೦ ಎಕರೆ ದೊಡ್ಡ ಜಾಗವಾಗಿದ್ದು, ವೈಜ್ಞಾನಿಕವಾಗಿ ಮಾಡಿದರೆ ಯಾರಿಗೂ ಯಾವದೇ ತೊಂದರೆ ಆಗುವದಿಲ್ಲ ಎಂದು ಹೇಳಿದರು.

ನೀರಿನ ಸಮಸ್ಯೆಯಾಗಲ್ಲ

ನಗರ ಸಭಾ ಸದಸ್ಯ ಸತೀಶ್ ಮಾತನಾಡಿ, ಯೋಜನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದಾರೆ. ಘಟಕದಲ್ಲಿ ಕಸ ಸಂಗ್ರಹ ಆಗುವದಿಲ್ಲ, ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡಲಾಗುವದು. ಕಾಂಕ್ರಿಟ್ ಬೆಡ್ ಹಾಕುವದರಿಂದ ನೀರು ಹೊರ ಬರುವ ಸಾಧ್ಯತೆಯಿಲ್ಲ. ಯಾರಿಗೂ ತೊಂದರೆ ಆಗಲ್ಲ ಎಂದು ಹೇಳಿದರು.

ಕಸದ ನಿರ್ವಹಣೆ ಕರ್ತವ್ಯ

ಕಸದ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಿಲ್ಲಾಡಳಿತ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ವತಿಯಿಂದ ಪ್ರತಿವಾರ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ಸತೀಶ ಸಲಹೆ ಮಾಡಿದರು.

ಹೈ ಕೋರ್ಟ್ ಆದೇಶದಂತೆ ಘನತಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗವನ್ನು ಗುರುತಿಸಿ ವೀಕ್ಷಣೆ ಮಾಡಲಾಗಿದೆ. ಘನತಾಜ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮನೆಯಲ್ಲಿಯೇ ಸ್ವಯಂ ಪ್ರೇರಿತರಾಗಿ ಕಸದ ನಿರ್ವಹಣೆ ಮಾಡುವಂತಾಗಬೇಕು. ಈ ರೀತಿ ನಿರ್ವಹಣೆ ಮಾಡುವವರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯತಿ ನೀಡಲು ಅವಕಾಶವಿದೆಯೇ ಎಂದು ಪರಿಶೀಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.

ಹಿರಿಯ ಪರಿಸರ ಅಧಿಕಾರಿ ಪ್ರಕಾಶ್ ಮಾತನಾಡಿ ಈ ಹಿಂದೆ ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಘನ ತ್ಯಾಜ್ಯಗಳ ನಿರ್ವಹಣೆ ಮಾಡುವುದು ಕಡಿಮೆಯಾಗಿದೆ. ನಗರ ಪ್ರದೇಶದಲ್ಲಿ ತ್ಯಾಜ್ಯಗಳ ನಿರ್ವಹಣೆ ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ನಗರ ಪ್ರದೇಶಗಳಲ್ಲಿ ನಗರಸಭೆ ಮೂಲಕ ಘನತ್ಯಾಜ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ತ್ಯಾಜ್ಯವನ್ನು ಕಡಿಮೆ ಮಾಡಿದಷ್ಟು ಲ್ಯಾಂಡ್ ಫಿಲ್ಲಿಂಗ್‌ನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲ್ಯಾಂಡ್ ಫಿಲ್ಲಿಂಗ್‌ನ್ನು ನಿಲ್ಲಿಸುವಂತೆ ಧ್ವನಿಗಳು ಕೇಳಿಬರುತ್ತಿದೆ. ಆದರೆ ಸರ್ಕಾರದಿಂದ ಲ್ಯಾಂಡ್ ಫಿಲ್ಲಿಂಗ್‌ನ್ನು ನಿಲ್ಲಿಸಬೇಕೆಂಬ ಯಾವುದೇ ಆದೇಶವಿರುವುದಿಲ್ಲ ಎಂದು ಮಾಹಿತಿ ನೀಡಿದರು.

೨ನೇ ಮೊಣ್ಣಂಗೇರಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಲಮೂಲಗಳ ಬಗ್ಗೆ ಜನರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಆ ಪ್ರದೇಶವನ್ನು ಪುನರ್ ಪರಿಶೀಲಿಸುವಂತೆ ಸಲಹೆ ಮಾಡಿದರು.

ಪರಿಸರ ಸಂಯೋಜಕರಾದ ಮುನಿರಾಜು ಅವರು ಘನತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದ ನಿರ್ಮಾಣ ಯೋಜನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯ ಕೆ.ಎಸ್. ರಮೇಶ್, ವಲಯ ಪರಿಸರ ಅಧಿಕಾರಿ ರಘುರಾಮ್, ಪೌರಾಯುಕ್ತ ವಿಜಯ, ನಗರಸಭೆ ಸದಸ್ಯರು, ನಗರಸಭೆ ಆರೋಗ್ಯ ಶಾಖೆಯ ಎಇಇ ಸೌಮ್ಯ, ಗ್ರಾಮಸ್ಥರು ಇತರರು ಇದ್ದರು.