ಸೋಮವಾರಪೇಟೆ, ಸೆ. ೨೩: ಇಲ್ಲಿನ ಶ್ರೀ ಬಸವೇಶ್ವರ ದೇವಾಲಯ, ವೀರಶೈವ ಸಮಾಜ, ಅಕ್ಕನ ಬಳಗ ಮತ್ತು ಬಸವೇಶ್ವರ ಯುವಕ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ೫ನೇ ವರ್ಷದ ಶರನ್ನವರಾತ್ರಿ ಉತ್ಸವ ಅದ್ಧೂರಿಯಿಂದ ಆಚರಿಸಲಾಗುವುದು ಎಂದು ಸಮಾಜದ ಯಜಮಾನರಾದ ಬಿ.ಪಿ. ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೬ ರಿಂದ ಅ.೫ ರವರೆಗೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ಶ್ರೀ ಆದಿಶಕ್ತಿ ನವದುರ್ಗೆಯರ ಘಟಸ್ಥಾಪನೆ, ಶ್ರೀ ದೇವಿ ಮಹಾತ್ಮೆ ಪಾರಾಯಣ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿದೆ ಎಂದರು.

ತಾ. ೨೬ ರಂದು ಬೆಳಿಗ್ಗೆ ೮ಕ್ಕೆ ಆನೆಕೆರೆಯಿಂದ ಗಂಗೆ ಪೂಜೆಯೊಂದಿಗೆ ಶ್ರೀದುರ್ಗಾದೇವಿಯ ಮೂರ್ತಿಯನ್ನು ದೇವಾಲಯಕ್ಕೆ ತಂದು ಘಟಸ್ಥಾಪಿಸಲಾಗುವುದು. ದೇವಿಗೆ ಕೈಲಾಸ ದರ್ಶನ ಅಲಂಕಾರ ಮಾಡಲಾಗುವುದು ಎಂದು ಹೇಳಿದರು.

ತಾ. ೨೭ ರಂದು ದೇವಿಗೆ ವಿಳ್ಯದೆಲೆ ಅಲಂಕಾರ, ೨೮ ರಂದು ಗೆಜ್ಜೆವಸ್ತç ಅಲಂಕಾರ, ೨೯ ರಂದು ಬಳೆಗಳ ಅಲಂಕಾರ, ೩೦ ರಂದು ಹಣ್ಣಿನ ಅಲಂಕಾರ, ಅ. ೧ ರಂದು ನಗನಾಣ್ಯಗಳ ಅಲಂಕಾರ, ೨ ರಂದು ತರಕಾರಿ ಅಲಂಕಾರ ಮಾಡಲಾಗುವುದು. ಅಂದು ಸರಸ್ವತಿ ಪೂಜೆ ಇರುವುದರಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುವುದು. ಪೋಷಕರು ಮೊದಲೇ ಹೆಸರನ್ನು ನೋಂದಾಯಿಸಿ ಕೊಳ್ಳಬೇಕೆಂದರು.

ಅ. ೩ ರಂದು ದೇವಿಗೆ ಸೀರೆ ಅಲಂಕಾರ ಮಾಡಲಾಗುವುದು. ಅಂದು ದುರ್ಗಾಷ್ಟಮಿ ಇರುವುದರಿಂದ ದೇವಾಲಯದಲ್ಲಿ ದುರ್ಗಾಹೋಮ ನಡೆಸಲಾಗುವುದು. ೪ ರಂದು ರಾಜರಾಜೇಶ್ವರಿ ಅಲಂಕಾರ ಹಾಗೂ ೫ ರಂದು ಉಯ್ಯಾಲೋತ್ಸವ ಅಲಂಕಾರ ಮಾಡಲಾಗುವುದು.

ಸಂಜೆ ೬ ಗಂಟೆಗೆ ಬನ್ನಿಮುಡಿದು ವಿಜಯದಶಮಿ ಆಚರಣೆ, ನಂತರ ಶ್ರೀ ಆದಿಶಕ್ತಿ ಅಮ್ಮನವರ ಉಯ್ಯಾಲೋತ್ಸವ ನಡೆಯಲಿದೆ. ೯ ದಿನಗಳು ಹಗಲು ಮತ್ತು ರಾತ್ರಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. ೬೩೬೦೧೭೬೪೬೮, ೯೪೪೮೦೧೭೬೫೬ನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಮಾಜದ ಶೆಟ್ರು ಬಿ.ಆರ್. ಮೃತ್ಯುಂಜಯ, ಪ್ರಧಾನ ಕಾರ್ಯದರ್ಶಿ ಸಿ.ಸಿ. ನಾಗರಾಜ್, ಸದಸ್ಯರಾದ ಬಿ.ಎಸ್. ಗುರುಪ್ರಸಾದ್ ಇದ್ದರು.