ಸೋಮವಾರಪೇಟೆ, ಸೆ. ೨೦: ತಾಲೂಕಿನ ಮಸಗೋಡಿನಿಂದ ಕಣಿವೆವರೆಗಿನ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಕೂಡಲೇ ಸರಿಪಡಿಸಲು ಗ್ರಾಮಸ್ಥರು ಆಗ್ರಹಿಸಿದ್ದ ಹಿನ್ನೆಲೆ ಸ್ಥಳಕ್ಕೆ ಸೋಮವಾರಪೇಟೆ ಲೊಕೋಪ ಯೋಗಿ ಇಲಾಖೆಯ ಎಇಇ ಮಹೇಂದ್ರಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸ್ಥಳೀಯ ಇಂಜಿನಿಯರ್ ಪೀಟರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಳೆದ ಹಲವು ವರ್ಷಗಳಿಂದ ರಸ್ತೆ ದುಸ್ಥಿತಿಯಲ್ಲಿದ್ದು, ಮನವಿ ಮಾಡಿದ ಸಂದರ್ಭ ಮಾತ್ರ ಸ್ಥಳಕ್ಕೆ ಬಂದು ಹೋಗುವ ನೀವು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಯ ವ್ಯವಸ್ಥೆ ಇಲ್ಲ. ದಿನಕ್ಕೆ ನೂರಾರು ಟಿಪ್ಪರ್‌ಗಳು ಸುಮಾರು ೪೦ ಟನ್ ಕಲ್ಲನ್ನು ತುಂಬಿಸಿ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಕಾಟಾಚಾರಕ್ಕೆ ರಸ್ತೆ ಮಾಡುವುದು ಬೇಡ. ಮುಂದಿನ ೧೫ ದಿನಗಳ ಒಳಗೆ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಗುಣಮಟ್ಟದ ರಸ್ತೆ ನಿರ್ಮಿಸಿ ಎಂದು ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎನ್. ಅನಂತ್ ಒತ್ತಾಯಿಸಿದರು.
ಸ್ಥಳದಲ್ಲಿದ್ದ ಎಇಇ ಮಹೇಂದ್ರಕುಮಾರ್ ಮಾತನಾಡಿ, ಈ ರಸ್ತೆಯನ್ನು ಸದ್ಯಕ್ಕೆ ಮಳೆಹಾನಿ ಪರಿಹಾರದ ಯೋಜನೆಯಲ್ಲಿ ಸೇರಿಸಿ ತುರ್ತು ಪ್ರದೇಶಗಳಲ್ಲಿ ಸರಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ, ಪದಾಧಿಕಾರಿಗಳಾದ ಟಿ.ಕೆ. ಲೋಕಾನಂದ, ಹೆಚ್.ಕೆ. ಲೋಕೇಶ್, ಎಸ್.ಆರ್. ಅರುಣ್‌ರಾವ್, ಎ.ಹೆಚ್. ತಿಮ್ಮಯ್ಯ, ಪ್ರಸನ್ನ, ಉಲ್ಲಾಸ್, ಕಾಟಿಕೊಪ್ಪಲು, ಮಸಗೋಡು, ಮದಲಾಪುರ, ಹೊಸಳ್ಳಿ, ನೇರುಗಳಲೆ, ಸೀಗೆಹೊಸೂರು, ಆಡಿನಾಡೂರು, ಯಲಕನೂರು, ಕುಂಬಾರಹಡ್ಲು, ಹುಣಸೆಪಾರೆ ಗಿರಿಜನ ಹಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಪ್ರಮುಖರು ಜಮಾಯಿಸಿ ಶೀಘ್ರವಾಗಿ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.