ಕೂಡಿಗೆ, ಸೆ. ೨೧: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬ ಹಿತರಕ್ಷಣಾ ವೇದಿಕೆ ವತಿಯಿಂದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ತಂಡವು ಬೆಂಗಳೂರಿನಲ್ಲಿ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಪೂಜಾರಿ ಅವರನ್ನು ಭೇಟಿ ಮಾಡಿಲಾಗಿತ್ತು.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಸರ್ವೆ ನಂಬರ್ ೫೪/೨ ರಲ್ಲಿ ೫ ಸೆಂಟ್ ಜಾಗವನ್ನು ಈಗಾಗಲೇ ಕಾಯ್ದಿರಿಸಿಕೊಂಡಿರುವ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಸಮುದಾಯದ ಭವನ ನಿರ್ಮಾಣಕ್ಕೆ ರೂ. ೩ ಕೋಟಿ ವೆಚ್ಚದ ನೀಲಿ ನಕ್ಷೆಯನ್ನು ತಯಾರಿಸಲಾಗಿದೆ. ಈ ಸಮುದಾಯ ಭವನಕ್ಕೆ ಸರಕಾರದ ವತಿಯಿಂದ ಹಣವನ್ನು ಒದಗಿಸುವಂತೆ ಶಾಸಕರ ಪತ್ರದ ಮೂಲಕ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿದ ಸಚಿವರು ಇಲಾಖೆ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಕೊಡಗು ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣ ಸಮುದಾಯದ ಭವನಕ್ಕೆ ಅನುದಾನವನ್ನು ನೀಡುವ ಭರವಸೆಯನ್ನು ನೀಡಿರುತ್ತಾರೆ ಎಂದು ಜಿಲ್ಲಾ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪ್ರಭಾಕರ್ ತಿಳಿಸಿದ್ದರು.

ಭೇಟಿ ಸಂದರ್ಭ ಅಧ್ಯಕ್ಷ ಪ್ರಭಾಕರ್, ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಮೋಹನ್, ನಿರ್ದೇಶಕರಾದ ಭುವನಗಿರಿ ಮಹದೇವ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್, ಕುಮಾರ್, ವಿಜಯನಗರ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ..ಆರ್. ರವಿ ಇದ್ದರು.