ಕೂಡಿಗೆ, ಸೆ. ೨೦ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾ ಕೂಟವು ಕೂಡಿಗೆಯ ಸರಕಾರಿ ಕ್ರೀಡಾಶಾಲೆಯ ಮೈದಾನದಲ್ಲಿ ಅರಂಭಗೊAಡಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಕೊಡಗು ಹಾಕಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಪಳಂಗಡ ಲವಕುಮಾರ್ ನೆರವೇರಿಸಿ ಮಾತನಾಡಿ, ಕ್ರೀಡೆಯ ಮೂಲಕ ಶಿಸ್ತು ಅಳವಡಿಸಿಕೊಂಡರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಎಂದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮಾತನಾಡಿ, ಈ ಬಾರಿ ಕೊಡಗು ಜಿಲ್ಲೆಗೆ ದಸರಾ ವಿಭಾಗದ ಮಟ್ಟದ ಕ್ರೀಡಾಕೂಟಕ್ಕೆ ಅವಕಾಶವನ್ನು ಇಲಾಖೆ ನೀಡಿದೆ. ಮೈಸೂರು ವಿಭಾಗ ಮಟ್ಟದ ನಾಲ್ಕು ಜಿಲ್ಲೆಯ ಪುರುಷರ ಮತ್ತು ಮಹಿಳಾ ತಂಡಗಳು ಕ್ರೀಡಕೂಟದಲ್ಲಿ ಭಾಗವಹಿಸಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ವಹಿಸಿ ಮಾತನಾಡಿ, ಕ್ರೀಡೆಯು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.
ವೇದಿಕೆಯಲ್ಲಿ ಕ್ರೀಡಾಶಾಲೆಯ ಆಡಳಿತ ಅಧಿಕಾರಿ ಜಯರಾಮ, ಶಾಲಾ ಮುಖ್ಯೋಪಾಧ್ಯಾಯ ದೇವಕುಮಾರ್, ಕೊಡಗು ಹಾಕಿ ಅಸೋಸಿಯೇಷನ್ ಕಾರ್ಯದರ್ಶಿ ಚಂಗಪ್ಪ, ಕೂಡಿಗೆ ಪದವಿ ಪೂರ್ವ ಕಾಲೇಜು ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ನಿವೃತ್ತ ವಾಲಿಬಾಲ್ ತರಬೇತುದಾರ ಸುರೇಶ್, ಅಥ್ಲೆಟಿಕ್ ತರಬೇತಿದಾರ ಅಂತೋಣಿ ಡಿಸೋಜ, ಹಾಕಿ ತರಬೇತಿದಾರ ವೆಂಕಟೇಶ, ದಿನಮಣಿ ಬಿ.ಸಿ. ಮಂಜುನಾಥ, ಸುರೇಶ್, ಮಹಾಬಲ ಸೇರಿದಂತೆ ಮತ್ತಿತರರು ಹಾಜರಿದ್ದರು.
ಕ್ರೀಡಾಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ಸ್ ರಾಜ್ಯಮಟ್ಟದ ಅಯ್ಕೆ ಪ್ರಕ್ರಿಯೆ ನಡೆಯಿತು. ವಿಭಾಗ ಮಟ್ಟದ ಮಹಿಳೆಯರ ಹಾಕಿ ಪಂದ್ಯದಲ್ಲಿ ಮೈಸೂರು ತಂಡವು ಪ್ರಥಮ, ಕೊಡಗು ತಂಡವು ದ್ವೀತಿಯ ಸ್ಥಾನ ಪಡೆಯಿತು.
ಪುರುಷರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ, ದ್ವಿತೀಯ ಸ್ಥಾನವನ್ನು ಹಾಸನ ತಂಡ ಪಡೆಯಿತು. ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿ.ಎಸ್. ಗುರುಸ್ವಾಮಿ ವಿತರಣೆ ಮಾಡಿದರು.