ಕುಶಾಲನಗರ, ಸೆ. ೨೦: ಸ್ವಾತಂತ್ರö್ಯಕ್ಕೂ ಮುನ್ನ ಬ್ರಿಟಿಷರ ಆಳ್ವಿಕೆ ಸಂದರ್ಭ ಕೊಡವರಿಗೆ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ಅವರು ಕುಶಾಲನಗರ ಕೊಡವ ಸಮಾಜದ ವತಿಯಿಂದ ನಡೆದ ಕೈಲ್ ಪೊಳ್ದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಬ್ರಿಟಿಷರ ಅವಧಿಯಲ್ಲಿ ಎಲ್ಲೆಡೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕಲ್ಪಿಸಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯ ಕೊಡವರು ಉನ್ನತ ಶಿಕ್ಷಣ ಪಡೆಯುವ ಅವಕಾಶ ಒದಗಿತ್ತು ಎಂದರಲ್ಲದೆ, ಕಾಫಿ ಬೆಳೆಯನ್ನು ಜಿಲ್ಲೆಗೆ ಪರಿಚಯಿಸುವ ಮೂಲಕ ಜನರನ್ನು ಆರ್ಥಿಕವಾಗಿ ಬಲಾಡ್ಯರನ್ನಾಗಿಸುವ ಅವಕಾಶ ಲಭಿಸಿತ್ತು ಎಂದರು. ಇದೇ ಸಂದರ್ಭ ಕೋವಿ ಲೈಸನ್ಸ್ ರಿಯಾಯಿತಿ ಮತ್ತಿತರ ಸೌಲಭ್ಯಗಳನ್ನು ಕೊಡಗಿನ ಜನತೆ ಪಡೆಯುವಂತಾಗಿತ್ತು ಎಂದರು. ಇತಿಹಾಸವನ್ನು ತಿಳಿದಲ್ಲಿ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧ್ಯ ಎಂದ ಕಾರ್ಯಪ್ಪ, ಕೊಡವರ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕುಶಾಲನಗರ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಮಂಡೆಪ್ಪAಡ ಬೋಸ್ ಮೊಣ್ಣಪ್ಪ ವಹಿಸಿದ್ದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಅಯಿಲಪಂಡ ಸಂಜು ಬೆಳ್ಳಿಯಪ್ಪ ಇದ್ದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಮೇವಡ ಚಿಂಗಪ್ಪ, ಅನಿತಾ ಕಾರ್ಯಪ್ಪ, ಕುಶಾಲನಗರ ಕೊಡವ ಸಮಾಜದ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸದಸ್ಯರುಗಳು ಇದ್ದರು. ಅಯಿಲಪಂಡ ಸಂಜು ಬೆಳ್ಳಿಯಪ್ಪ ಸ್ವಾಗತಿಸಿ ಚೆಪ್ಪುಡಿರ ರತನ್ ಕಾರ್ಯಕ್ರಮ ನಿರೂಪಿಸಿದರು.