ಮಡಿಕೇರಿ, ಸೆ. ೨೦: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ಅಜ್ಜ ಅಜ್ಜಿಯರ ದಿನವನ್ನು ತಾ. ೧೨ ರಂದು ಸಂಭ್ರಮದಿAದ ಆಚರಿಸಲಾಯಿತು. ಅಜ್ಜ- ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳ ಕೈಹಿಡಿದು ಶಾಲೆಯ ಆವರಣವನ್ನು ಪ್ರವೇಶಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡಿದ್ದು, ಸ್ವಾಗತ ನೃತ್ಯವನ್ನು ವಿದ್ಯಾರ್ಥಿನಿಯರಾದ ಆರನೇ ತರಗತಿಯ ಹನ್ಸಿಕ ಪೊನ್ನಪ್ಪ ಬಿ ಹಾಗೂ ಐದನೇ ತರಗತಿಯ ಅಕ್ಷರ ಸಂತೋಷ್ ಮಾಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಎಂ ಬಿ ಅವರು ತಮ್ಮ ಭಾಷಣದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಅಜ್ಜ ಅಜ್ಜಿಯಂದಿರ ಪಾತ್ರ ಬಹಳ ಮುಖ್ಯ.
ಜೀವನದ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಅವರು ಹೆಚ್ಚಿನ ಶ್ರದ್ಧೆಯನ್ನು ವಹಿಸುತ್ತಾರೆ ಎಂದು ದಿನದ ಮಹತ್ವದ ಬಗ್ಗೆ ತಿಳಿಸಿದರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಗಮಿಸಿದಂತಹ ಅಜ್ಜ-ಅಜ್ಜಿಯಂದಿರಿಗೆ ಹಲವಾರು ಮನರಂಜನಾ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಿರಿಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಯ ವಿಜೇತರಿಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್. ಅವರು ಬಹುಮಾನ ವಿತರಿಸಿದರು. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ.ಎನ್. ಅವರು ಮಾತನಾಡಿ, ಈ ದಿನ ಮೊಮ್ಮಕ್ಕಳು ತಮ್ಮ ಅಜ್ಜ ಅಜ್ಜಿಯಂದಿರಿಗೆ ಅವರು ತೋರಿಸುವ ನಿರಂತರ ಪ್ರೀತಿ, ಬೆಂಬಲ, ಕಾಳಜಿಯನ್ನು ಸ್ಮರಿಸಿ ಅವರಿಗೆ ಧನ್ಯವಾದಗಳನ್ನು ಹೇಳುವ ದಿನ. ಆಧುನಿಕ ಬದುಕಿನ ಜಂಜಾಟದಲ್ಲಿ ಮಗ್ನರಾಗಿರುವ ತಂದೆ ತಾಯಿಯರ ಜವಾಬ್ದಾರಿಯನ್ನು ಹೆಚ್ಚಾಗಿ ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಗಳಿಗಾಗಿ ಸಮಯ ಮೀಸಲಿಡುವುದನ್ನು ಕಾಣುತ್ತೇವೆ ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಏಳನೇ ತರಗತಿಯ ಕಾಜಲ್ ಪಿ.ಸಿ. ಹಾಗೂ ಸೃಷ್ಟಿ ಬಿ.ಎಸ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂಟನೇ ತರಗತಿಯ ತಾನ್ಯಾ ಅಯ್ಯಪ್ಪ ಸ್ವಾಗತಿಸಿದರು, ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ.ಎನ್. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಅಜ್ಜ ಅಜ್ಜಿಯಂದಿರು, ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮೀಳ ಎಂ.ಬಿ, ಸಹ ಮುಖ್ಯೋಪಾಧ್ಯಾಯಿನಿ ಲೀನಾ ಸಿ.ಡಿ. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.