ನಾಪೋಕ್ಲು, ಸೆ. ೧೯: ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ, ಪ್ರೌಢಶಾಲೆಗೆ ಶಿಕ್ಷಕರ ನೇಮಕ ಮಾಡಿ, ರಸ್ತೆಯನ್ನು ಅಭಿವೃದ್ಧಿಪಡಿಸಿ, ಪೈಸಾರಿ ಜಾಗ ತೆರವು, ಮೂಲಭೂತ ಸೌಲಭ್ಯ ಗಳನ್ನು ಕಲ್ಪಿಸುವಂತೆ ಶನಿವಾರ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೇಡಿಕೆಗಳ ಸುರಿಮಳೆ ಮಾರ್ದನಿಸಿತು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ಜಮಾಅತ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಐಸ ಶುಕೂರು ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಗ್ರಾಮದ ವಿವಿಧ ಸಮಸ್ಯೆಗಳನ್ನು ತಹಶೀಲ್ದಾರ್ ಮುಂದಿಟ್ಟರು ಜಲಜೀವನ್ ಮಿಷನ್ ಅಡಿ ಕಾಮಗಾರಿಗಳು ನಡೆದು ಸ್ಥಗಿತಗೊಂಡಿರುವುದರಿAದ ನೀರು ಸರಬರಾಜು ಇನ್ನೂ ಆಗಿಲ್ಲ. ಗ್ರಾಮಕ್ಕೆ ನೀರು ಸರಬರಾಜಿನ ವ್ಯವಸ್ಥೆಯನ್ನು ಕೂಡಲೇ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂಬುದನ್ನು ಸಾರ್ವಜನಿಕರು ಗಮನಕ್ಕೆ ತಂದರು. ಇಲಾಖೆಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶವಿದ್ದು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಶಾಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯ ಗ್ರಾಮಸ್ಥರಿಂದ ಕೇಳಿ ಬಂತು. ಎಮ್ಮೆಮಾಡು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯು ಅಲ್ಲಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಕೂರುಳಿ ಭಾಗದಿಂದ ಬರುವ ರಸ್ತೆಯು ಹದಗೆಟ್ಟಿದೆ. ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿ ದರು. ಎಮ್ಮೆಮಾಡು ಉರೂಸ್‌ಗೆ ಮುನ್ನ ರಸ್ತೆ ದುರಸ್ತಿಪಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಪೈಸಾರಿ ಜಾಗ ತೆರವು ಗ್ರಾಮಸ್ಥರ ಆಗ್ರಹ ಸೇರಿದಂತೆ ವಿವಿಧ ಅಹವಾಲುಗಳನ್ನು ಸ್ವೀಕರಿಸಿ ತಹಶೀಲ್ದಾರ್ ಮಹೇಶ್ ಮತ್ತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದರು. ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು.

ಆಹಾರ ಶಿರಸ್ತೆದಾರ್ ಗಿರಿಸುತ, ಕೃಷಿ ಇಲಾಖೆಯ ನಾರಾಯಣ ರೆಡ್ಡಿ, ಶಿಕ್ಷಣ ಇಲಾಖೆಯ ಬಿಆರ್‌ಪಿ ಮೋಹನ್ ಕುಮಾರ್, ಅಬಕಾರಿ ನಿರೀಕ್ಷಕ ಸ್ವರ್ಣ ಬಿಆರ್‌ಪಿ ಮಂಜುಳಾ ಚಿತ್ರಪುರ, ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಸುನೀತ, ತಾಲೂಕು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ನಂದಿನಿ, ಪಿಡಬ್ಲುö್ಯ್ಲ ಡಿ ಎ ಇ ಇ ಜವರೇಗೌಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ, ಹೋಬಳಿ ಕಂದಾಯ ಇಲಾಖೆಯ ಆರ್. ಐ ರವಿಕುಮಾರ್, ಸಿಬ್ಬಂದಿ, ಸೆಸ್ಕ್ ಇಲಾಖೆಯ ಜೂನಿಯರ್ ಇಂಜಿನಿಯರ್ ಹರೀಶ್, ರಾಣಾಧಿಕಾರಿ ಸದಾಶಿವ ಸಿಬ್ಬಂದಿ, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

-ದುಗ್ಗಳ ಸದಾನಂದ.