ಡಿಕೆಶಿ ವಿರುದ್ಧದ ಪ್ರಕರಣ ರದ್ದುಪಡಿಸಿದ್ದ ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆಯಾಜ್ಞೆ

ನವದೆಹಲಿ, ಸೆ. ೧೯: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ತಡೆ ನೀಡಿದೆ. ೨೦೧೮ರಲ್ಲಿ ಡಿಕೆ ಶಿವಕುಮಾರ್ ಬಳಿ ಐಟಿ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಈಗಲ್‌ಟನ್ ರೆಸಾರ್ಟ್ನಲ್ಲಿ ಐಟಿ ಅಧಿಕಾರಿಗಳಿಂದ ಜಪ್ತಿ ಮಾಡಲಾಗಿತ್ತು. ಡಿಕೆ ಶಿವಕುಮಾರ್ ಇದ್ದ ರೂಂನಲ್ಲಿ ಹಣಕಾಸು ವರ್ಗಾವಣೆ ದಾಖಲೆ ವಶಪಡಿಸಿಕೊಳ್ಳಲಾಗಿತ್ತು. ಆದರೆ ಐಟಿ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ 'ಸುಪ್ರೀಂ' ಮೊರೆ ಹೋಗಿತ್ತು. ಇದೀಗ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೇ ೪ ವಾರದ ಒಳಗೆ ಹೊಸ ಅರ್ಜಿ ಸಲ್ಲಿಕೆ ಮಾಡುವಂತೆ ಐಟಿಗೆ ಸುಪ್ರೀಂ ಸೂಚಿಸಿದೆ. ೨೦೧೭ರ ಆಗಸ್ಟ್ ೨ರಂದು ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿತ್ತು. ಈ ಸಂದರ್ಭದಲ್ಲಿ ಈಗಲ್ಟನ್ ರೆಸಾರ್ಟ್ನಲ್ಲಿ ಗುಜರಾತಿನ ೪೪ ಮಂದಿ ಕಾಂಗ್ರೆಸ್ ಶಾಸಕರ ಯೋಗಕ್ಷೇಮದ ಉಸ್ತುವಾರಿಯನ್ನು ಡಿ.ಕೆ. ಶಿವಕುಮಾರ್ ನೋಡಿಕೊಳ್ಳುತ್ತಿದ್ದರು. ಈ ಮಾಹಿತಿ ತಿಳಿದ ಅಧಿಕಾರಿಗಳು ಅಲ್ಲಿಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಬ್ರಿಟನ್ ರಾಣಿ ೨ನೇ ಎಲಿಜಬೆತ್ ಅಂತ್ಯಕ್ರಿಯೆ

ಲAಡನ್, ಸೆ. ೧೯: ಇತ್ತೀಚಿಗೆ ನಿಧನರಾಗಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಸೋಮವಾರ ನೆರವೇರಿತು.ರಾಣಿಯ ಗೌರವಾರ್ಥ ಬ್ರಿಟನ್ ದೇಶಾದ್ಯಂತ ಎರಡು ನಿಮಿಷ ಮೌನ ವಹಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿಂದ ಹಿಡಿದು ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಜಾಗತಿಕ ನಾಯಕರು ಮೌನಾಚರಣೆಯಲ್ಲಿ ಪಾಲ್ಗೊಂಡರು. ಬಳಿಕ ರಾಷ್ಟ್ರಗೀತೆ ಯೊಂದಿಗೆ ರಾಣಿಗೆ ಅಂತಿಮ ವಿವಾದ ಹೇಳಲಾಯಿತು. ಇದಕ್ಕೂ ಮುನ್ನ ಸುಧೀರ್ಘ ವರ್ಷಗಳ ಕಾಲ ಬ್ರಿಟನ್ ಆಳ್ವಿಕೆ ನಡೆಸಿದ್ದ ಬ್ರಿಟನ್ ರಾಣಿಯ ಪಾರ್ಥಿವ ಶರೀರವಿದ್ದ ಶವ ಪೆಟ್ಟಿಗೆಯನ್ನು ರಾಜ ಮನೆತನದ ಸದಸ್ಯರು, ವಿಶ್ವದ ಉನ್ನತ ನಾಯಕರ ಉಪಸ್ಥಿತಿಯಲ್ಲಿ ವೆಸ್ಟ್ ಮಿನಿಸ್ಟರ್ ಅಬೆಗೆ ತರಲಾಯಿತು. ವಿಸ್ಟನ್ ಚರ್ಚಿಲ್ ೧೯೬೫ ರಲ್ಲಿ ನಿಧನರಾದ ನಂತರ ಬ್ರಿಟನ್ ನಲ್ಲಿ ನಡೆದ ರಾಜಮನೆತದವರ ಮೊದಲ ಅಂತ್ಯಕ್ರಿಯೆ ಇದಾಗಿದೆ. ಸ್ಕಾಟ್ ಲ್ಯಾಂಡ್ ನ ಬಾಲ್ಮೋರಲ್ ಕಾಸ್ಟಲ್ ನಲ್ಲಿ ಸೆಪ್ಟೆಂಬರ್ ೮ ರಂದು ರಾಣಿ ಎಲಿಜಬೆತ್ ೧೧ ನಿಧನರಾಗಿದ್ದರು.

ಉತ್ತರ ಪ್ರದೇಶ ಗ್ಯಾಂಗ್ ರೇಪ್ : ೧೨ ದಿನಗಳ ನಂತರ ಬಾಲಕಿ ಸಾವು

ಲಖನೌ, ಸೆ. ೧೯: ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ಸೆಪ್ಟೆಂಬರ್ ಏಳರಂದು ಇಬ್ಬರು ದುಷ್ಕರ್ಮಿಗಳು ಗ್ಯಾಂಗ್ ರೇಪ್ ನಡೆಸಿ, ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದರಿಂದ ಗಾಯಗೊಂಡಿದ್ದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಇಂದು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ತಿಂಗಳ ಆರಂಭದಲ್ಲಿ ಜಿಲ್ಲೆಯ ಕುನ್ವಾರಪುರ ಗ್ರಾಮದಲ್ಲಿ ೧೬ ವರ್ಷದ ಹದಿಹರೆಯದ ಬಾಲಕಿ ಮೇಲೆ ಇಬ್ಬರು ಕಿರಾತಕರು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಲಖನೌ ಆಸ್ಪತ್ರೆಯೊಂದರಲ್ಲಿ ೧೨ ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಬಾಲಕಿ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಆರೋಪಿಗಳಾದ ರಾಜ್ ವೀರ್ (೧೯) ತಾರಾಚಂದ್ (೨೫) ನನ್ನು ಪೋಕ್ಸೋ ಮತ್ತು ಎಸ್ ಸಿ, ಎಸ್ ಟಿ ಕಾಯ್ದೆಯಡಿ ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಮಹಿಳೆಯ ಕತ್ತು ಸೀಳಲು ಯತ್ನಿಸಿದ ಟಿಆರ್ ಎಸ್ ಮುಖಂಡ!

ಹೈದರಾಬಾದ್, ಸೆ. ೧೯: ಹೈದರಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮುಖಂಡನೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿ ಕತ್ತು ಸೀಳಲು ಯತ್ನಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೈದರಾಬಾದ್‌ನ ಪಂಜಗುಟ್ಟಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಶಾ (೩೫) ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಮುಖಂಡ ವಿಜಯ್ ಸಿನ್ಹಾ ರೆಡ್ಡಿ ಈ ದುಷ್ಕೃತ್ಯ ಎಸಗಿರುವುದಾಗಿ ಪತಿ ಆರೋಪಿಸಿದ್ದಾರೆ. ಪಂಜಗುಟ್ಟಾ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಚಂದ್ರ ರೆಡ್ಡಿ ಮಾತನಾಡಿ, ಎಫ್ ಐಆರ್ ದಾಖಲಿಸಿ ಐಪಿಸಿ ಸೆಕ್ಷನ್ ೪೪೮, ೩೨೪, ೩೫೪(ಎ) ೫೦೬ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿಶಾ ಕುತ್ತಿಗೆಯ ಮೇಲೆ ಕತ್ತರಿಸಿ ಉಂಟಾದ ಗಾಯದ ನೋವಿನಿಂದ ನರಳುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸೋಮವಾರ ಮುಂಜಾನೆ ವಿಜಯ್ ಸಿನ್ಹಾ ರೆಡ್ಡಿ ಪತ್ನಿಯ ಕತ್ತು ಕೊಯ್ಯಲು ಯತ್ನಿಸಿದ್ದ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಮಳೆ, ಪ್ರವಾಹಕ್ಕೆ ಮುಳುಗಿದ ಶಾಲೆ

ಚನ್ನಪಟ್ಟಣ, ಸೆ. ೧೯: ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ತತ್ತರಿಸಿ ಮೂರು ವಾರಗಳೇ ಕಳೆದರೂ, ಹಲವು ಪ್ರದೇಶಗಳು ಈಗಲೂ ಜಲಾವೃತವಾಗಿವೆ. ಭಾರಿ ಮಳೆ, ಪ್ರವಾಹಕ್ಕೆ ಸರ್ಕಾರಿ ಶಾಲೆಯೊಂದು ಮುಳುಗಿದ್ದು, ವಿದ್ಯಾರ್ಥಿಗಳು ಬೇರೆ ಮಾರ್ಗವಿಲ್ಲದೇ ಸ್ಥಳೀಯ ದೇವಸ್ಥಾನದಲ್ಲಿ ಪಾಠ ಕೇಳುವಂತಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ಪಟ್ಟಣದ ತಟ್ಟೆಕೆರೆ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇನ್ನೂ ಶಾಲೆಗೆ ಪ್ರವೇಶಿಸಲಾಗದೆ ಬವಣೆ ಪಡುತ್ತಿದ್ದಾರೆ. ಶಾಲೆಯಲ್ಲಿ ಈಗಲೂ ನಾಲ್ಕು ಅಡಿಯಷ್ಟು ನೀರು ನಿಂತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಶಾಲಾ ಆವರಣದಲ್ಲಿ ನಿಂತಿರುವ ನೀರು ತೆಗೆಯಲು ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ವಿದ್ಯಾರ್ಥಿಗಳು ಬೇರೆ ದಾರಿಯಿಲ್ಲದೆ ಹತ್ತಿರದ ದೇವಸ್ಥಾನದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.