ಸೋಮವಾರಪೇಟೆ,ಸೆ.೧೯: ಸೋಮವಾರಪೇಟೆಯಿಂದ ಬೇರ್ಪಟ್ಟು ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ಬಂದ ನಂತರ ಕಂದಾಯ ಇಲಾಖಾ ಕೆಲಸ ಕಾರ್ಯಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂದು ತಾಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಗರಗಂದೂರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿದರು.
ಜಿಲ್ಲಾಧಿಕಾರಿಗಳ ನಡೆ ಗ್ರಾಮದೆಡೆಗೆ ಕಾರ್ಯಕ್ರಮ ತಹಶಿಲ್ದಾರ್ ಎಸ್.ಎನ್. ನರಗುಂದ್ ಅಧ್ಯಕ್ಷತೆಯಲ್ಲಿ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕುಶಾಲನಗರ ನೂತನ ತಾಲೂಕು ಅಸ್ತಿತ್ವಕ್ಕೆ ಬಂದ ನಂತರ ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಸೂರ್ಲಬ್ಬಿ, ಕಿಕ್ಕರಳ್ಳಿ, ಮಂಕ್ಯ, ಶಿರಂಗಳ್ಳಿ, ಕೊಪ್ಪತ್ತೂರು, ಕಿರುದಾಲೆ, ಕಡಂದಾಳು, ಜಂಬೂರು, ಕುಂಬೂರು, ಹಾಡಗೇರಿ, ಮೂವತೊಕ್ಲು, ಇಗ್ಗೋಡ್ಲು, ಕಾಂಡನಕೊಲ್ಲಿ, ಗರಗಂದೂರು, ಅಂಜನಗೇರಿ, ಬೆಟ್ಟಗೇರಿ ಸೇರಿ ಒಟ್ಟು ೧೬ ಗ್ರಾಮಗಳು ಹಾಗೂ ೧೧ ಉಪಗ್ರಾಮಗಳು ಸೋಮವಾರಪೇಟೆ ಕಸಬಾ ಹೋಬಳಿಗೆ ವರ್ಗಾವಣೆ ಆಗಿರುತ್ತದೆ.
ತಾಲೂಕು ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಇದುವರೆಗೂ ಪಹಣಿ ಸೋಮವಾರಪೇಟೆ ಹೋಬಳಿಗೆ ವರ್ಗಾವಣೆ ಆಗಿರುವುದಿಲ್ಲ. ಇದರಿಂದ ೧೧ಇ, ಪೋಡಿ, ಭೂ ಪರಿವರ್ತನೆ ಇಂತಹ ಯಾವುದೇ ವಹಿವಾಟು ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ವಹಿವಾಟು ನಡೆಯದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಜನ ಭೂಮಿ ಖರೀದಿ ಮಾಡಿ, ಮಾಲೀಕರಿಗೆ ದುಡ್ಡು ಕೊಟ್ಟು ತಮ್ಮ ಹೆಸರಿಗೆ ವರ್ಗಾಯಿಸಲು ಸಾಧ್ಯವಾಗದೇ ಕಷ್ಟ ಪಡುವಂತಾಗಿದೆ. ಅಕ್ರಮ ಸಕ್ರಮ ಫಾರಂ ೫೭ ಗೆ ಕೂಡ ಅರ್ಜಿ ಸಲ್ಲಿಸಲು ಆಗುತ್ತಿಲ್ಲ, ಕೂಡಲೇ ಸರಿಪಡಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ತಂತ್ರಾAಶದಲ್ಲಿ ಸ್ಥಳಕ್ಕೆ ಸಂಬAಧಿಸಿ ಮಾಹಿತಿಗಳು ದಾಖಲಾಗಬೇಕಾಗಿದೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಮನೆ ಮನೆಗಳಿಗೆ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದರು. ಇದೇ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಲಾಯಿತು.
ಪೈಸಾರಿ, ಊರುಡುವೆ ಜಾಗದಲ್ಲಿ ಶ್ರೀಮಂತರಿಗೆ ಹಕ್ಕುಪತ್ರ ದೊರೆಯುತ್ತದೆ. ಆದರೆ ಬಡವರಿಗೆ ನಿವೇಶನ ಕೊಡಲು ಸಾಧ್ಯವಾಗದಿರುವುದು ದುರಂತ ಎಂದು ನಿವಾಸಿ ರಮೇಶ್ ದೂರಿದರು. ಸಾರ್ವಜನಿಕರ ಸಮಸ್ಯೆ ಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಂದಾಯ ಇಲಾಖೆಗೆ ಸಂಬAಧಪಟ್ಟ ಅರ್ಜಿಗಳು ವಿಲೇವಾರಿಯಾಗದೆ ವಿಳಂಬವಾದರೆ ನೇರವಾಗಿ ತಮ್ಮನ್ನು ಭೇಟಿಯಾಗಿ ಚರ್ಚಿಸಬಹುದು ಎಂದು ತಹಶೀಲ್ದಾರ್ ಭರವಸೆ ನೀಡಿದರು. ವೇದಿಕೆಯಲ್ಲಿ ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ. ಪದ್ಮನಾಭ, ಉಪಾಧ್ಯಕ್ಷೆ ಟಿ.ಬಿ. ಉಷಾ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.