ಸಿದ್ದಾಪುರ, ಸೆ. ೧೮: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದು, ಸದ್ಯದಲ್ಲೇ ಹುಲಿಯನ್ನು ಸೆರೆ ಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಹುಲಿಯ ಚಲನವಲನವನ್ನು ಕಂಡು ಹಿಡಿಯುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾಗಿದ್ದು, ಕಳೆದ ಒಂದು ವಾರಗಳಿಂದ ನಾಲ್ಕು ಜಾನುವಾರುಗಳನ್ನು ಸಾಯಿಸಿದ ಹುಲಿಯು ಕಾರ್ಯಾಚರಣೆ ಸಂದರ್ಭದಲ್ಲಿ ತಪ್ಪಿಸಿಕೊಂಡು ಕಣ್ಮರೆಯಾಗಿತ್ತು. ನಂತರ ಕಾಡು ಸೇರಿತ್ತು.
ಶನಿವಾರದಂದು ಸಂಜೆ ಮತ್ತೆ ಮಾಲ್ದಾರೆಯ ಅಸ್ತಾನದ ಬಳಿ ಎತ್ತುವೊಂದರ ಮೇಲೆ ಧಾಳಿ ನಡೆಸಿ ಕೊಂದು ಹಾಕಿತ್ತು. ಹೇಗಾದರೂ ಮಾಡಿ ಹುಲಿಯನ್ನು ಸೆರೆ ಹಿಡಿಯಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ದುಬಾರೆ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಗ್ರಾಮದ ಅಸ್ತಾನದಲ್ಲಿ ಎತ್ತುವನ್ನು ಸಾಯಿಸಿದ ಜಾಗದಲ್ಲಿ ಜಾನುವಾರಿನ ಮೃತ ದೇಹವನ್ನು ಇಟ್ಟು ಸ್ವಲ್ಪ ದೂರದಲ್ಲಿ ವಾಹನವೊಂದರಲ್ಲಿ ಸಿಬ್ಬಂದಿಗಳು ಕುಳಿತು ಕಾವಲು ಕಾದಿದ್ದು, ಹುಲಿಯು ಬಂದು ಹೋಗಿರುವ ಕುರುಹುಗಳು ಪತ್ತೆ ಆಗಿದೆ.
ಮೃತದೇಹದ ಸುತ್ತ ಮುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಈ ಸಿಸಿ ಕ್ಯಾಮರಾಗಳಲ್ಲಿ ಹುಲಿಯು ಸ್ಥಳಕ್ಕೆ ಬಂದು ಹೋಗಿರುವ ದೃಶ್ಯಗಳು ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ತಿತಿಮತಿ ವಲಯ ಅರಣ್ಯಾಧಿಕಾರಿಗಳು, ಎಸಿಎಫ್ ನೆಹರು ಹಾಗೂ ಗೋಪಾಲ್ ನೇತೃತ್ವದಲ್ಲಿ ಭಾನುವಾರದಂದು ಅಂದಾಜು ೬೫ಕ್ಕೂ ಹೆಚ್ಚು ಸಿಬ್ಬಂದಿ, ನಾಲ್ಕು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಹುಲಿಯನ್ನು ಸೆರೆಹಿಡಿಯಲು ಸರಕಾರ ಅಧಿಕೃತವಾಗಿ ಆದೇಶ ನೀಡಿದ್ದು, ಇದರಿಂದಾಗಿ ಉಪಟಳ ನೀಡುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ.